ಬೆಂಗಳೂರು, ಅ.6: ನಗರದ ವಿವಿಧೆಡೆ ನಿನ್ನೆ ಸಂಜೆ ಸುರಿದ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.ಕೆಲವು ಪ್ರದೇಶಗಳಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ರಸ್ತೆ ಕಾಮಗಾರಿಯಿಂದಾಗಿ ಈಗಾಗಲೇ ಕಿರಿದಾಗಿರುವ ಮಾರ್ಗಗಳಲ್ಲಿ ಮಳೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.
ಕೆ.ಆರ್.ಪುರಂ ಅಂಡರ್‌ಪಾಸ್‌ನಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ವಾಹನಗಳು ನೀರಿನಲ್ಲೇ ಸಂಚರಿಸುವಂತಾಯಿತು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ನೀರಿನಲ್ಲಿ ಸಂಚರಿಸಲು ಪರದಾಡಿದರು. ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿಂದ ಕೆಲಕಾಲ ವಾಹನ ಸಂಚಾರವೂ ನಿಧಾನಗೊಂಡಿತು.ಇದೇ ವೇಳೆ ಹೆಣ್ಣೂರು ಮುಖ್ಯ ರಸ್ತೆಯೂ ಸಂಪೂರ್ಣ ಜಲಾವೃತವಾಗಿತ್ತು.ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ನೀರಿನಲ್ಲೇ ಸಂಚರಿಸಬೇಕಾಯಿತು. ಮಳೆ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನಗಳ ವೇಗ ಕುಂಠಿತವಾಗಿ, ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.
ಲಾರಿ ಮೇಲೆ ಬಿದ್ದ ಬೃಹತ್ ಮರ;
ಗೊರಗುಂಟೆಪಾಳ್ಯ ಮುಖ್ಯರಸ್ತೆಯ ಸಿಗ್ನಲ್ ಬಳಿ ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಬೃಹತ್ ಮರವೊಂದು ಲಾರಿ ಮೇಲೆ ಬಿದ್ದಿದೆ. ಸಿಗ್ನಲ್‌ನಲ್ಲಿ ಎರಡು ಕಾರುಗಳು ಹಾಗೂ ಲಾರಿ ನಿಂತಿದ್ದ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರುಗಳ ಮೇಲೆ ಮರ ಬೀಳದೆ ಭಾರಿ ಅನಾಹುತ ತಪ್ಪಿದೆ. ಲಾರಿ ಚಾಲಕ ಕೂಡ ಅಪಾಯದಿಂದ ಪಾರಾಗಿದ್ದಾರೆ.
ಮರ ಬಿದ್ದ ಪರಿಣಾಮ ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್‌ರೋಡ್ ಕಡೆಗೆ ಹಾಗೂ ಸುಮ್ಮನಹಳ್ಳಿಯಿಂದ ತುಮಕೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಯಿತು. ಜಿಬಿಎ ಹಾಗೂ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಮರ ತೆರವು ಕಾರ್ಯಾಚರಣೆ ನಡೆಸಿದರು.
ಕಾಮಗಾರಿ ಹಳ್ಳಕ್ಕೆ ಬಿದ್ದ ಕಾರು:
ಚಂದಾಪುರದಲ್ಲಿ ಮಳೆ ಹಾಗೂ ರಸ್ತೆ ಕಾಮಗಾರಿ ವಾಹನ ಸವಾರರಿಗೆ ಮತ್ತೊಂದು ಸಂಕಷ್ಟ ತಂದಿದೆ. ಕಳೆದ ರಾತ್ರಿ ಸುರಿದ ಮಳೆಯ ನಡುವೆ ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಹಳ್ಳಕ್ಕೆ ಕಾರೊಂದು ವಾಲಿಕೊಂಡು ಬಿದ್ದಿದೆ. ಕಾರನ್ನು ಹೊರತೆಗೆಯಲು ಮಾಲೀಕರು ಹರಸಾಹಸಪಟ್ಟರು.
ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ನರಕಮಳೆಯ ಪರಿಣಾಮ ರಾತ್ರಿ ಮಾತ್ರವಲ್ಲದೆ ಇಂದು ಬೆಳಗ್ಗೆಯೂ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಮುಂದುವರಿಯಿತು. ಚಂದಾಪುರ ಸುತ್ತಮುತ್ತಲಿನ ರಸ್ತೆಗಳು ಬೆಳಗ್ಗೆಯೇ ಟ್ರಾಫಿಕ್ ಜಾಮ್ ಆಗಿತ್ತು.
ಚಂದಾಪುರ, ಹಳೆ ಚಂದಾಪುರ ಹಾಗೂ ನೆರಳೂರು ದಾಟಲು ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾಯಿತು.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ರಸ್ತೆಗಳು ಕಿರಿದಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಾಮಗಾರಿಗಾಗಿ ಮುಖ್ಯರಸ್ತೆಯ ಭಾಗ ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆಯ ಮೇಲೆ ವಾಹನಗಳ ಒತ್ತಡ ಹೆಚ್ಚಾಗಿದೆ.
ಏಕಮುಖ ಸಂಚಾರದ ಜೊತೆಗೆ ಅಡ್ಡಾದಿಡ್ಡಿ ವಾಹನ ಸಂಚಾರವೂ ದಟ್ಟಣೆಗೆ ಕಾರಣವಾಗಿದೆ.ಅತ್ತಿಬೆಲೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ ಅತ್ತಿಬೆಲೆ ಕಡೆಗೆ ಸಂಚರಿಸುವವರು ನಿತ್ಯವೂ ಸಂಕಷ್ಟ ಎದುರಿಸುವಂತಾಗಿದೆ. ಚಂದಾಪುರ ಜಂಕ್ಷನ್‌ನಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಟ್ರಾಫಿಕ್ ದಟ್ಟಣೆ ಸಾಮಾನ್ಯವಾಗಿದೆ.
ಫ್ಲೈ ಓವರ್ ಇದ್ದರೂ ಮೇಲೆಯೇ ವಾಹನಗಳ ಸಾಲು ಕಾಣಿಸಿಕೊಳ್ಳುತ್ತಿದೆ. ಸುಮಾರು ಐದಾರು ಕಿ.ಮೀ.ವರೆಗೆ ನಿರಂತರ ವಾಹನ ದಟ್ಟಣೆ ಉಂಟಾಗುತ್ತಿದೆ.
ಶಾಸಕರಿಗೂ ತಪ್ಪದ ಟ್ರಾಫಿಕ್ ಕಿರಿಕಿರಿ:
ನಿನ್ನೆ ರಾತ್ರಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಕೂಡ ಚಂದಾಪುರದ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಸುಮಾರು 50 ನಿಮಿಷಗಳ ಕಾಲ ಒಂದೇ ಸ್ಥಳದಲ್ಲಿ ಅವರ ಕಾರು ನಿಂತಿತ್ತು ಎನ್ನಲಾಗಿದೆ. ಮಳೆ, ರಸ್ತೆ ಕಾಮಗಾರಿ ಹಾಗೂ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಹೊಸೂರು ರಸ್ತೆ ಭಾಗದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
