ಬೆಂಗಳೂರು, ಅ.10- ಪಿಡಬ್ಲ್ಯೂಡಿ ಇಲಾಖೆಯಲ್ಲಿ ಬಿಲ್ ಪಾವತಿಯಾಗದ ಕಾರಣಕ್ಕೆ ಬೇಸರಗೊಂಡ ಗುತ್ತಿಗೆದಾರರು ಕಚೇರಿಗೆ ವಾಮಾಚಾರ ಮಾಡಿರುವ ವಿಲಕ್ಷಣ ಪ್ರಕರಣ ರಾಯಚೂರಿನಲ್ಲಿ ನಡೆದಿದೆ.ರಾಯಚೂರಿನ ಸಹಾಯಕ, ಕಾರ್ಯಪಾಲಕ ಅಭಿಯಂತರರ ಕಚೇರಿಯ ಮೇಲಿರುವ ಹುಣಿಸೇ ಮರಕ್ಕೆ ಮನುಷ್ಯಾಕೃತಿಯ ಕಪ್ಪುಗೊಂಬೆಯನ್ನು ಕಪ್ಪು ದಾರದಲ್ಲಿ ಕಟ್ಟಿ ತಲೆ ಕೆಳಕ್ಕಾಗಿ ಇಳಿಬಿಡಲಾಗಿದೆ. ಗೊಂಬೆಗೆ ಅರಿಶಿನ, ಕುಂಕುಮ ಹಚ್ಚಿ ಪೂಜೆ ಮಾಡಿರುವುದು ಕಂಡು ಬಂದಿದೆ.
ಮಹಾಲಯ ಅಮಾವಾಸ್ಯೆಯ ಮುನ್ನಾ ದಿನ ಈ ಗೊಂಬೆ ಪತ್ತೆಯಾಗಿದೆ. ಅದನ್ನು ಯಾವಾಗ ಕಟ್ಟಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿಲ್ಲ. ನಿನ್ನೆ ಕಚೇರಿಯ ನೀರಿನ ಸಮಸ್ಯೆ ಎದುರಾಗಿತ್ತು. ಅದನ್ನು ಪರಿಶೀಲಿಸಲು ಸಿಬ್ಬಂದಿಗಳು ಕಚೇರಿಯ ಮೇಲಿರುವ ವಾಟರ್ ಟ್ಯಾಂಕ್ ಅನ್ನು ಪರಿಶೀಲಿಸಲು ಹೋಗಿದ್ದರು. ಆ ವೇಳೆ ಹುಣಿಸೇ ಮರದ ಮೇಲಿದ್ದ ಹುಣಿಸೆ ಹಣ್ಣನ್ನು ಕಿತ್ತುಕೊಳ್ಳಲು ಮಹಿಳಾ ಸಿಬ್ಬಂದಿಯೊಬ್ಬರು ರೆಂಬೆಯೊಂದನ್ನು ಸರಿಸಿದಾಗ ಗೊಂಬೆ ಕಂಡು ಬಂದಿದೆ. ಕೂಡಲೆ ದಿಗ್ಭ್ರಾಂತರಾದ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಕೆಲ ಹಂತದ ಸಿಬ್ಬಂದಿಗಳೇ ಗೊಂಬೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಆದರೆ ಗೊಂಬೆಯನ್ನು ಕಂಡ ಸಿಬ್ಬಂದಿಗಳು ಆತಂಕಕ್ಕೊಳಗಾಗಿದ್ದು, ದೇವಸ್ಥಾನಗಳಿಗೆ ಸುತ್ತುವ ಮೂಲಕ ದೋಷಪರಿಹಾರದ ಪೂಜೆಗಳ ಮೊರೆ ಹೋಗಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ:
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಲೇ ಬಂದಿವೆ. ಸುಮಾರು ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಬಾಕಿ ಮೊದಲಿನಿಂದಲೂ ಉಳಿದಿತ್ತು. ಅದನ್ನು ಹಂತ ಹಂತವಾಗಿ ಇತ್ಯರ್ಥ ಪಡಿಸಲಾಗಿದ್ದು, ಈಗ ಸುಮಾರು 50 ರಿಂದ 60 ಕೋಟಿ ರೂ.ನಷ್ಟು ಬಾಕಿ ಉಳಿದಿದೆ. ಅದನ್ನು ಜ್ಯೇಷ್ಠತೆ ಆಧರಿಸಿ ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
ಹಿಂದಿನ ಬಿಜೆಪಿ ಅವಧಿಯಲ್ಲಿ ಕಾಮಗಾರಿಗಳನ್ನು ಗುತ್ತಿಗೆ ಪಡೆದಿದ್ದವರಿಗೆ ಸಮರ್ಪಕವಾದ ಆದೇಶಗಳಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೆಲವರ ಬಿಲ್‌ಗಳು ಪಾವತಿಯಾಗುತ್ತಿಲ್ಲ. ಅಧಿಕಾರಿಗಳಿಗೆ ದುಬಾರಿ ಲಂಚಕೊಟ್ಟು ಬಿಲ್ ಅನ್ನು ಪಡೆಯುವ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಗುತ್ತಿಗೆದಾರರು ಬೇಸತ್ತಿದ್ದು, ವಾಮಾಚಾರ ಮಾಡಿಸಿರಬಹುದು ಎಂಬ ಶಂಕೆಗಳಿವೆ.
ಸಿಸಿಟಿವಿ ಪರಿಶೀಲಿಸಿರುವ ಸಿಬ್ಬಂದಿಗಳಿಗೆ ಕೆಲವು ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದಿವೆ ಎಂದು ಹೇಳಲಾಗಿದೆ. ಸರ್ಕಾರದ ತಪ್ಪಿಗೆ ನಾವು ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
