ಬೆಂಗಳೂರು, ಅ.10-ಬೆಂಗಳೂರಿನ ಬಸವನಗರ ಮುಖ್ಯರಸ್ತೆಯಲ್ಲಿ ವಿಭೂತಿಪುರ ಕೆರೆ ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸುಮಾರು 20 ದಿನಗಳ ಕಾಲ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದು, ಕಾಮಗಾರಿ ಅವಧಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಎಚ್‌ಎಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗ ಬದಲಾವಣೆ ಜಾರಿಗೊಳಿಸಲಾಗಿದೆ. ಇದರಿಂದ ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ, ಬಸವನಗರ, ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಹಾಗೂ ಬಿಇಎಂಎಲ್ ಭಾಗಗಳ ನಡುವೆ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗಿದೆ.
ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ ಮತ್ತು ಬಸವನಗರ ಕಡೆಯಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಹಾಗೂ ಬಿಇಎಂಎಲ್ ಕಡೆಗೆ ತೆರಳುವ ಭಾರೀ ಸರಕು ಸಾಗಣೆ ವಾಹನಗಳು, ಬಿಎಂಟಿಸಿ ಬಸ್‌ಗಳು, ಶಾಲಾ ಬಸ್‌ಗಳು ಮತ್ತು ಲಘು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅದೇ ರೀತಿ, ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಯಿಂದ ವಿಭೂತಿಪುರ, ಬಸವನಗರ, ಎಚ್‌ಎಎಲ್ ಹಾಗೂ ಮಾರತ್ತಹಳ್ಳಿ ಕಡೆಗೆ ಬರುವ ಎಲ್ಲ ವಾಹನಗಳ ಸಂಚಾರಕ್ಕೂ ನಿರ್ಬಂಧ ಇರಲಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಮುಂಚಿತವಾಗಿ ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ಪಡೆದು ಪ್ರಯಾಣಿಸಲು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಪರ್ಯಾಯ ಮಾರ್ಗಗಳು :
ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ ಮತ್ತು ಬಸವನಗರ ಕಡೆಯಿಂದ ವಿಜ್ಞಾನ ನಗರ ಅಥವಾ ಕಗ್ಗದಾಸಪುರಕ್ಕೆ ತೆರಳುವ ವಾಹನಗಳು ಹಳೆ ವಿಮಾನ ನಿಲ್ದಾಣ ರಸ್ತೆಯನ್ನು ಬಳಸಬೇಕು. ಸುರಂಜನ್‌ದಾಸ್ ರಸ್ತೆ ಬ್ರಿಡ್ಜ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸುರಂಜನ್‌ದಾಸ್ ರಸ್ತೆಯಲ್ಲಿ ಸಾಗಬೇಕು. ಬಳಿಕ ಬಿಇಎಂಎಲ್ ಜಂಕ್ಷನ್‌ನಲ್ಲಿ ಮತ್ತೆ ಬಲ ತಿರುವು ಪಡೆದು ಮಲ್ಲೇಶಪಾಳ್ಯ ಮುಖ್ಯರಸ್ತೆಯ ಮೂಲಕ ವಿಜ್ಞಾನ ನಗರ ಮತ್ತು ಕಗ್ಗದಾಸಪುರ ತಲುಪಬಹುದು.
ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಯಿಂದ ಬರುವ ವಾಹನಗಳು ಮಲ್ಲೇಶಪಾಳ್ಯ ಮುಖ್ಯರಸ್ತೆಯ ಮೂಲಕ ಬಿಇಎಂಎಲ್ ಜಂಕ್ಷನ್ ತಲುಪಬೇಕು. ಅಲ್ಲಿಂದ ಎಡ ತಿರುವು ಪಡೆದು ಸುರಂಜನ್‌ದಾಸ್ ರಸ್ತೆಯಲ್ಲಿ ಸಾಗಬೇಕು. ನಂತರ ಸುರಂಜನ್‌ದಾಸ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆಯ ಮೂಲಕ ತಮ ಗಮ್ಯಸ್ಥಾನ ತಲುಪಬಹುದು.
ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸುಮಾರು 20 ದಿನಗಳ ಕಾಲ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವಾಹನ ಸವಾರರು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ, ನಿಗದಿಪಡಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಅನಗತ್ಯ ಸಂಚಾರ ದಟ್ಟಣೆ ಮತ್ತು ಪ್ರಯಾಣ ವಿಳಂಬ ತಪ್ಪಿಸಲು ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
