ಬೆಂಗಳೂರು,ಅ.10-ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಒಂದು ನಾಡ ಬಂದೂಕು ಹಾಗೂ 146 ನಾಡ ಬಾಂಬ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಡಗುಂಡ್ಲಹಳ್ಳಿ ಗ್ರಾಮದ ನರಸಿಂಹಪ್ಪ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಬೋಡಗುಂಡ್ಲಹಳ್ಳಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಆಯುಧಗಳು ಹಾಗೂ ನಾಡ ಬಾಂಬ್ಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಮಾಹಿತಿ ಆಧಾರದ ಮೇಲೆ ಕೆಂಚರ್ಲಹಳ್ಳಿ ಠಾಣೆ ಇನ್್ಸಪೆಕ್ಟರ್ ನಾರಾಯಣಸ್ವಾಮಿ ಮತ್ತು ಬಟ್ಲಹಳ್ಳಿ ಠಾಣೆ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ನೇತೃತ್ವದ ಸಿಬ್ಬಂದಿ ತಂಡ ಮನೆ ಮೇಲೆ ದಾಳಿ ಮಾಡಿದೆ. ದಾಳಿ ಸಂದ ರ್ಭದಲ್ಲಿ ಒಂದು ನಾಡ ಬಂದೂಕು ಮತ್ತು ಭಾರಿ ಪ್ರಮಾಣದ ನಾಡ ಬಾಂಬ್ಗಳನ್ನು ಸಂಗ್ರಹಿಸಿಟ್ಟಿರುವುದು ಕಂಡು ಬಂದ ಹಿನ್ನಲೆಯಲ್ಲಿ ನರಸಿಂಹಪ್ಪನನ್ನು ಬಂಧಿಸಿ ಅವುಗಳನ್ನೆಲ್ಲಾ ವಶಪಡಿಸಿ ಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಂಧಿತ ನಾಗಿರುವ ನರಸಿಂಹಪ್ಪನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಈ ನಾಡ ಬಾಂಬ್ಗಳು ಹಾಗೂ ನಾಡ ಬಂದೂಕು ಎಲ್ಲಿ ಸಿಕ್ಕಿದವು, ಯಾರು ತಂದುಕೊಟ್ಟರು, ಯಾವ ಉದ್ದೇಶಕ್ಕಾಗಿ ಅವು ಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಪ್ರಾಥಮಿಕ ತನಿಖೆಯಿಂದ ಕಾಡು ಪ್ರಾಣಿಗಳನ್ನು ಭೇಟೆಗೆ ಬಳಸಲು ನಾಡ ಬಾಂಬ್ಗಳನ್ನು ಸಂಗ್ರಹಿಸಿಟ್ಟಿದ್ದುದು ತಿಳಿದು ಬಂದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
