ಬೆಂಗಳೂರು, ಅ. 1- ಕಳೆದ ಎರಡು ವಾರಗಳಿಂದ ಚೇತರಿಸಿಕೊಂಡಿರುವ ಮುಂಗಾರಿನಿಂದಾಗಿ ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದೆ. ನಿನ್ನೆ ರಾಜಧಾನಿ ಬೆಂಗಳೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ವಿಜಯಪುರ, ವಿಜಯನಗರ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಭಾಗಶಃ ವ್ಯಾಪಕವಾಗಿ ಸಾಧಾರಣ ಮಳೆಯಾಗಿದೆ.
ಉಳಿದಂತೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಒಣಹವೆ ಮುಂದುವರಿದಿದ್ದು, ಮಳೆಯ ಕೊರತೆ ಕಂಡುಬಂದಿದೆ.ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ಒಣಹವೆ ಮುಂದುವರಿಯಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಮುನ್ಸೂಚನೆಗಳಿವೆ. ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದ ಉಳಿದೆಡೆ ಯಾವುದೇ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲ. ಬರದಿಂದ ಕಂಗೆಟ್ಟಿದ್ದ ರಾಜ್ಯದ ಒಳನಾಡಿನಲ್ಲಿ ಪದೇಪದೇ ಬೀಳುತ್ತಿರುವ ಮಳೆಯಿಂದ ಬೆಳೆಗಳಿಗೆ ಅನುಕೂಲವಾಗಲಿದ್ದು, ರೈತ ಸಮುದಾಯ ನಿಟ್ಟುಸಿರು ಬಿಡುವಂತಾಗಿದೆ.
