Homeರಾಷ್ಟ್ರೀಯ174 ಪ್ರಯಾಣಿಕರ ಜೀವ ಉಳಿಸಿದ ಪೈಲಟ್‌ ಸ್ಮಿತ್ ಮಚ್ಚರ್‌ ಸಾಹಸಕ್ಕೆ ಮೋದಿ ಮೆಚ್ಚುಗೆ

174 ಪ್ರಯಾಣಿಕರ ಜೀವ ಉಳಿಸಿದ ಪೈಲಟ್‌ ಸ್ಮಿತ್ ಮಚ್ಚರ್‌ ಸಾಹಸಕ್ಕೆ ಮೋದಿ ಮೆಚ್ಚುಗೆ

ನವದೆಹಲಿ, ಅ. 1- ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ (ಎಫ್‌ಝಡ್‌1073)ದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸಿ, 174 ಪ್ರಯಾಣಿಕರ ಜೀವ ರಕ್ಷಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್ ಮಚ್ಚರ್‌ ಅವರ ಸಾಹಸ ಹಾಗೂ ಧೈರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.ಕ್ಯಾಪ್ಟನ್‌ ಮಚ್ಚರ್‌ ಅವರ ಶೌರ್ಯದ ಬಗ್ಗೆ ಇಡೀ ಭಾರತವೇ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, ಕ್ಯಾಪ್ಟನ್‌ ಸ್ಮಿತ್ ಮಚ್ಚರ್‌ ನಿಜವಾದ ಹೀರೋ. ಗಂಭೀರ ಅಪಾಯ ಹಾಗೂ ತೀವ್ರ ಗಾಯಗಳ ನಡುವೆಯೂ ಅವರು ತೋರಿದ ಅಚಲ ಧೈರ್ಯ ಮತ್ತು ಸಾಹಸವು ನೂರಾರು ಜೀವಗಳನ್ನು ರಕ್ಷಿಸಿದೆ. ದೊಡ್ಡ ದುರಂತವೊಂದನ್ನು ತಪ್ಪಿಸಿದ ಅವರ ಶೌರ್ಯಕ್ಕೆ ಭಾರತವೇ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಗಾಯಗೊಂಡಿರುವ ಪೈಲಟ್‌ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಸೆಪ್ಟೆಂಬರ್‌ 30ರಂದು ಬೋಯಿಂಗ್‌ 737 ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಕಾಕ್‌ಪಿಟ್‌ನಲ್ಲಿದ್ದ ಸಹ-ಪೈಲಟ್‌ ಇದ್ದಕ್ಕಿದ್ದಂತೆ ಕ್ಯಾಪ್ಟನ್‌ ಸ್ಮಿತ್ ಮಚ್ಚರ್‌ ಅವರ ಮೇಲೆ ಹಲ್ಲೆ ನಡೆಸಿ, ವಿಮಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದನು.

ಈ ವೇಳೆ ಮಚ್ಚರ್‌ ಗಂಭೀರವಾಗಿ ಗಾಯಗೊಂಡರೂ, ವಿಮಾನದ ನಿಯಂತ್ರಣವನ್ನು ಸಹ-ಪೈಲಟ್‌ ವಹಿಸಿಕೊಳ್ಳದಂತೆ ಕೊನೆಯವರೆಗೂ ಹೋರಾಡಿದರು. ಘಟನೆಯ ವೇಳೆ ವಿಮಾನವು ಕೆಲವೇ ಕ್ಷಣಗಳಲ್ಲಿ ಸುಮಾರು 15,600 ಅಡಿಗೆ ತೀವ್ರವಾಗಿ ಕುಸಿಯಿತು. ಪ್ರತಿ ನಿಮಿಷಕ್ಕೆ ಸುಮಾರು 23,000 ಅಡಿ ವೇಗದಲ್ಲಿ ವಿಮಾನ ಕೆಳಕ್ಕೆ ಇಳಿದಿತ್ತು ಎಂದು ತಿಳಿದುಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದರೂ ಕ್ಯಾಪ್ಟನ್‌ ಮಚ್ಚರ್‌ ಧೈರ್ಯಗೆಡದೆ ವಿಮಾನ ಅನಾಹುತಕ್ಕೀಡಾಗದಂತೆ ತಡೆದರು.

ಕಾಕ್‌ಪಿಟ್‌ನಲ್ಲಿ ನಡೆಯುತ್ತಿದ್ದ ಗೊಂದಲ ಹಾಗೂ ವಿಮಾನದ ಹಠಾತ್‌ ಕುಸಿತವನ್ನು ಗಮನಿಸಿದ ಸಿಬ್ಬಂದಿ ಮತ್ತು ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ಪ್ರವೇಶಿಸಿ, ದಾಳಿ ನಡೆಸಿದ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಿಸಿದರು. ಅದೃಷ್ಟವಶಾತ್‌, ಅದೇ ವಿಮಾನದಲ್ಲಿ ಪ್ರಯಾಣಿಕರಾಗಿ ತೆರಳುತ್ತಿದ್ದ ಫ್ಲೈದುಬೈನ ಮತ್ತಿಬ್ಬರು ಪೈಲಟ್‌ಗಳು ತಕ್ಷಣ ಕಾರ್ಯಪ್ರವೃತ್ತರಾಗಿ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡರು.ಸೌದಿ ಅರೇಬಿಯಾದ ತಬೂಕ್‌ ಆಸ್ಪತ್ರೆಯಲ್ಲಿ ಕ್ಯಾಪ್ಟನ್‌ ಸಿತ್‌ ಮಚ್ಚರ್‌ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ಮುಂಬೈನಿಂದ ಅವರ ಕುಟುಂಬಸ್ಥರು ತಬೂಕ್‌ಗೆ ತೆರಳಿದ್ದಾರೆ.

ದಾಳಿ ನಡೆಸಿದ ಸಹ-ಪೈಲಟ್‌ನನ್ನು ಸೌದಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಯುತ್ತಿದೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿ, ತನಿಖೆ ಪೂರ್ಣಗೊಳ್ಳುವವರೆಗೆ ಇಸ್ರೇಲ್‌ಗೆ ತೆರಳುವ ಹಾಗೂ ಅಲ್ಲಿಂದ ಹೊರಡುವ ತನ್ನ ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಫ್ಲೈದುಬೈ ಸಂಸ್ಥೆ ಘೋಷಿಸಿದೆ. ಸಂಕಷ್ಟದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನೂರಾರು ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್‌ ಸ್ಮಿತ್ ಮಚ್ಚರ್‌ ಅವರ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES
spot_img

Latest News