Homeರಾಜ್ಯವೈಭವದ ದಸರಾ ಆಚರಣೆಗೆ ಮೈಸೂರು ಸಜ್ಜು : ನಾಳೆ ಅದ್ದೂರಿ ಚಾಲನೆ

ವೈಭವದ ದಸರಾ ಆಚರಣೆಗೆ ಮೈಸೂರು ಸಜ್ಜು : ನಾಳೆ ಅದ್ದೂರಿ ಚಾಲನೆ

ಮೈಸೂರು,ಅ.10- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಚಾಲನೆ ದೊರೆಯಲಿದ್ದು, 11 ದಿನಗಳ ಕಾಲ ನಡೆಯುವ ವೈಭವದ ಆಚರಣೆಗೆ ಸಾಂಸ್ಕೃತಿಕ ನಗರಿ ಸಂಪೂರ್ಣ ಸಜ್ಜಾಗಿದೆ.ಈ ಬಾರಿಯ ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿ ದ್ದಾರೆ. ಜಲಋಷಿ ಎಂದೇ ಖ್ಯಾತರಾಗಿರುವ ಶ್ರೀಗಳು ಉತ್ತರ ಕರ್ನಾಟಕದಲ್ಲಿ ನೀರಿನ ಸಂರಕ್ಷಣೆ

ಹಾಗೂ 5,000ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ದಸರಾ ಇತಿಹಾಸದಲ್ಲಿ ಉದ್ಘಾಟನೆ ಮಾಡುತ್ತಿ ರುವ 7ನೇ ಶ್ರೀಗಳು ಇವರಾಗಿದ್ದು, ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಶ್ರೀಗಳೊಬ್ಬರು ದಸರಾ ಉದ್ಘಾಟಿಸುತ್ತಿರುವುದು ಇದೇ ಮೊದಲು.

ನಾಳೆ ಬೆಳಿಗ್ಗೆ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 11.50 ರಿಂದ 12.13 ರೊಳಗೆ ಸಲ್ಲುವ ಧನುರ್‌ ಲಗ್ನದ ಶುಭ ಮುಹೂರ್ತದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಡಿಸಿಎಂ ಜಿ.ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸಚಿವರು, ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅ.11(ನಾಳೆ) ರ ಕಾರ್ಯಕ್ರಮಗಳು :
-ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ – ಗಣ್ಯರಿಗೆ ಮಾತ್ರ ಅವಕಾಶ (ಪೂರ್ವಾನುಮತಿ ಕಡ್ಡಾಯ)
-ಬೆಳಿಗ್ಗೆ 11.50 – ದಸರಾ ಉದ್ಘಾಟನೆ
-ಮಧ್ಯಾಹ್ನ – ದಸರಾ ವಸ್ತು ಪ್ರದರ್ಶನ ಉದ್ಘಾಟನೆ
-ಸಂಜೆ 6 ಗಂಟೆಗೆ – ಅರಮನೆಯಲ್ಲಿ ನಂದಿಧ್ವಜ ಪೂಜೆ
-ಸಂಜೆ 7 ರಿಂದ 10 ಗಂಟೆಯವರೆಗೆ – ಅರಮನೆ ಸೇರಿದಂತೆ 146 ಕಿ.ಮೀ ರಸ್ತೆ, 118 ವೃತ್ತಗಳಲ್ಲಿ ದೀಪಾಲಂಕಾರಕ್ಕೆ ಚಾಲನೆ ದೊರೆಯಲಿದೆ.

11 ದಿನಗಳ ವೇಳಾಪಟ್ಟಿ :
ಅ.11ರಿಂದ 21ರವರೆಗೆ ದಸರಾ ಮಹೋತ್ಸವ, ಅ.13ರಿಂದ 17ರವರೆಗೆ ಯುವ ದಸರಾ, ಅ.16 ಸರಸ್ವತಿ ಪೂಜೆ, ಅ.18ರಿಂದ 19ರವರೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ದಸರಾದಲ್ಲಿ ಕಂಬಳ , ಅ.18ರಿಂದ 20ರವರೆಗೆ ಸೂರ್ಯಕಿರಣ್‌ ವೈಮಾನಿಕ ಪಡೆ ಪ್ರದರ್ಶನ, ಅ.17ರಿಂದ 18ರವರೆಗೆ ಡ್ರೋನ್‌ ಶೋ, ಅ.20ರಂದು ಮಹಾನವಮಿ, ಆಯುಧ ಪೂಜೆ, ಅ.21ರಂದು ವಿಜಯದಶಮಿ – ಮಧ್ಯಾಹ್ನ ಅರಮನೆಯಿಂದ ಬನ್ನಿಮಂಟಪದವರೆಗೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹದ ಜಂಬೂಸವಾರಿ, ಸಂಜೆ ಪಂಜಿನ ಕವಾಯತು ನಡೆಸಲಾಗುವುದು.

ಬಿಗಿ ಭದ್ರತೆ :
ಐತಿಹಾಸಿಕ ದಸರಾ ಮಹೋತ್ಸವಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ದೇಶ, ವಿದೇಶ ಹಾಗೂ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದು, ಭದ್ರತಾ ದೃಷ್ಟಿಯಿಂದ ನಗರದೆಲ್ಲೆಡೆ ಬಿಗಿ ಪೊಲೀಸ್‌‍ ಬಂದೊಬಸ್ತ್‌ ಕಲ್ಪಿಸಲಾಗಿದೆ.

ದಸರಾ ಭದ್ರತೆಗಾಗಿ 6,719 ಪೊಲೀಸ್‌‍ ಸಿಬ್ಬಂದಿ, 33 ಕೆಎಸ್‌‍ಆರ್‌ಪಿ ತುಕಡಿ ನಿಯೋಜನೆ. ಪ್ರವಾಸಿಗರಿಗೆ 18 ಕಡೆ ಪೊಲೀಸ್‌‍ ಸಹಾಯ ಕೇಂದ್ರ, ಮೈಸೂರು ದಸರಾ 2026 ವಿಸಿಟರ್‌ ಪೋರ್ಟಲ್‌ ಆರಂಭ. ಜಂಬೂಸವಾರಿ ಮಾರ್ಗದ 92 ಶಿಥಿಲ ಕಟ್ಟಡಗಳ ಮೇಲೆ ವೀಕ್ಷಣೆಗೆ ನಿಷೇಧ. ಸುಳ್ಳು ಸುದ್ದಿ ಹರಡುವವರ ಮೇಲೆ ನಿಗಾ ಇಡಲು 20 ಸೋಶಿಯಲ್‌ ಮೀಡಿಯಾ ತಂಡಗಳನ್ನು ರಚಿಸಲಾಗಿದ್ದು, ಮೈಸೂರು ದಸರಾ ಯಶಸ್ಸಿಗೆ ಜಿಲ್ಲಾಡಳಿತ, ಪೊಲೀಸ್‌‍ ಇಲಾಖೆ ಹಾಗೂ ಸರ್ಕಾರ ಕ್ರಮ ಕೈಗೊಂಡಿದೆ.

ಈಗಾಗಲೇ ಅರಮನೆ ನಗರಿ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ದಸರಾವನ್ನು ಮತ್ತಷ್ಟು ಆಕರ್ಷಕವಾಗಿಸಲು ಒಟ್ಟು 146 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ಭವ್ಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, 3500 ಡ್ರೋನ್‌ಗಳೊಂದಿಗೆ 4 ದಿನ ವಿಶೇಷ ಪ್ರದರ್ಶನ ನಡೆಯಲಿದ್ದು, ನವಿಲಿನ ಕಲಾಕೃತಿ ಮೂಲಕ ಗಿನ್ನಿಸ್‌‍ ದಾಖಲೆಗೆ ಪ್ರಯತ್ನಿಸಲಾಗಿದೆ. ಇಂದಿನಿಂದ 31 ರವರೆಗೆ 21 ದಿನಗಳ ಕಾಲ ದೀಪಾಲಂಕಾರವಿರಲಿದೆ. ಅದಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಮೈಸೂರು ದಸರಾ ಸ್ವಾಗತಕ್ಕೆ ಸಜ್ಜಾಗಿದ್ದು, ಈಗಾಗಲೇ ನಗರದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿದ್ದು, ಹೊರದೇಶಗಳ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಲಾಡ್ಜ್ ಗಳಲ್ಲಿ ವಾಸ್ತವ್ಯ ಹೂಡಿದ್ದು, ದಸರಾದ ವೈಭವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

RELATED ARTICLES
spot_img

Latest News