ಬೆಂಗಳೂರು,ಅ.11–ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗಿರುವ ವಿದ್ಯುತ್ ಸ್ಥಾವರಗಳ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಿಸಿ, ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಈ ಸಂಬಂಧ ಇಂಧನ ಇಲಾಖೆಯು ಆದೇಶ ಹೊರಡಿಸಿದ್ದು, ಪರಿಶೀಲನಾ ಕಾರ್ಯವನ್ನು ಅ.31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.
ಈ ಹಿಂದೆ ಜುಲೈ 1ರಿಂದ ಆರಂಭವಾದ ಪರಿಶೀಲನಾ ಕಾರ್ಯವನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಬಳಿಕ ಆಗಸ್ಟ್ 31ರಂದು ಹೊರಡಿಸಿದ ಆದೇಶದ ಮೂಲಕ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಇದೀಗ ವಿದ್ಯುತ್ ಸರಬರಾಜು ಕಂಪನಿಗಳ ಮನವಿಯ ಮೇರೆಗೆ ಮತ್ತೊಮೆ ಅವಧಿ ವಿಸ್ತರಿಸಲಾಗಿದೆ. ನಾಲ್ಕು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿರುವ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ಗಳು ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿ, ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಹೆಚ್ಚುವರಿ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕಿದೆ.
ಸಂಗ್ರಹಿಸಿದ ಮಾಹಿತಿಯನ್ನು ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸಿ, ಫಲಾನುಭವಿಗಳ ವಿವರಗಳನ್ನು ಪರಿಶೀಲಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ಗೃಹಜ್ಯೋತಿ ಯೋಜನೆಯ ಸೌಲಭ್ಯವು ಅರ್ಹ ಹಾಗೂ ಜೀವಂತ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಈ ಪರಿಶೀಲನಾ ಕ್ರಮ ಕೈಗೊಂಡಿದೆ. ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿರುವ ಮನೆ ಮಾಲೀಕರು ಅಥವಾ ಬಾಡಿಗೆದಾರರು ಮೃತಪಟ್ಟಿರುವುದು, ಬಾಡಿಗೆದಾರರು ಮನೆ ಬದಲಿಸಿರುವುದು, ಮನೆಗಳ ಖರೀದಿ ಮತ್ತು ಮಾರಾಟದ ಬಳಿಕ ದಾಖಲೆಗಳನ್ನು ನವೀಕರಿಸದಿರುವುದು ಸೇರಿದಂತೆ ಹಲವು ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದವು.
ಇದಲ್ಲದೆ, ಮನೆಗಳಿಗೆ ಬೀಗ ಹಾಕಿರುವುದು, ಫಲಾನುಭವಿಗಳ ಮಾಹಿತಿ ಲಭ್ಯವಾಗದಿರುವುದು, ಮಾಹಿತಿ ನೀಡಲು ನಿರಾಕರಿಸಿರುವ ಪ್ರಕರಣಗಳು, ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಸ್ಥಾವರಗಳು, ಖಾತೆ ಬದಲಾವಣೆ ಹಾಗೂ ಮೇಲ್ಛಾವಣಿ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಸ್ಥಾವರಗಳ ಮರುಪರಿಶೀಲನೆ ಅಗತ್ಯವಿದೆ ಎಂದು ವಿದ್ಯುತ್ ಸರಬರಾಜು ಕಂಪನಿಗಳು ತಿಳಿಸಿವೆ. ಮತದಾರರ ಗುರುತಿನ ಚೀಟಿ ವಿವರಗಳ ಪರಿಶೀಲನೆ ಮತ್ತು ಮರುಭೇಟಿಗಳೂ ವಿಳಂಬಕ್ಕೆ ಕಾರಣವಾಗಿವೆ.
ಷರತ್ತುಗಳು ಯಥಾಸ್ಥಿತಿ
ಹೊಸ ಆದೇಶದ ಪ್ರಕಾರ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಈ ಹಿಂದೆ ಹೊರಡಿಸಿರುವ ಇತರ ಆದೇಶಗಳು ಮತ್ತು ಸುತ್ತೋಲೆಗಳಲ್ಲಿನ ಅಂಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ನಿಗದಿಪಡಿಸಿರುವ ನಿಯಮಗಳು ಮುಂದುವರಿಯಲಿದ್ದು, ಹೆಚ್ಚುವರಿ ಕಾಲಾವಕಾಶವು ಫಲಾನುಭವಿಗಳ ಮಾಹಿತಿ ಸಂಗ್ರಹಣೆ ಮತ್ತು ದಾಖಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಮಾತ್ರ ಅನ್ವಯಿಸುತ್ತದೆ.
ಅ.31ರೊಳಗೆ ಪರಿಶೀಲನೆ ಪೂರ್ಣಗೊಳಿಸುವಂತೆ ಸೂಚಿಸಿರುವ ಸರ್ಕಾರದ ಈ ಕ್ರಮದಿಂದ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳನ್ನು ಸಮರ್ಪಕವಾಗಿ ನವೀಕರಿಸಲು ಮತ್ತು ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗಲಿದೆ.
