Homeರಾಜ್ಯರಾಜ್ಯ ಸರ್ಕಾರ ಬರ ನಿರ್ವಹಣೆ ಬಿಟ್ಟು ಸ್ಟಿಂಗ್‌ ಆಪರೇಷನ್‌ ಚರ್ಚೆ ಮಾಡುತ್ತಿರೋದೇಕೆ..? : ಹೆಚ್ಡಿಕೆ ಪ್ರಶ್ನೆ

ರಾಜ್ಯ ಸರ್ಕಾರ ಬರ ನಿರ್ವಹಣೆ ಬಿಟ್ಟು ಸ್ಟಿಂಗ್‌ ಆಪರೇಷನ್‌ ಚರ್ಚೆ ಮಾಡುತ್ತಿರೋದೇಕೆ..? : ಹೆಚ್ಡಿಕೆ ಪ್ರಶ್ನೆ

ಹಾಸನ, ಅ.11-ರಾಜ್ಯದಲ್ಲಿ ತೀವ್ರ ಬರಗಾಲದ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಸ್ಟಿಂಗ್‌ ಆಪರೇಷನ್‌ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದಲ್ಲಿ ಚರ್ಚೆ ನಡೆಯುತ್ತಿರುವುದು ಎಷ್ಟು ಸರಿ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ, ಬೆಳೆ ಪರಿಹಾರ, ಪಶುಗಳಿಗೆ ಮೇವಿನ ಕೊರತೆ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಅವ್ಯವಸ್ಥೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಒಣಭೂಮಿ ಹಾಗೂ ನೀರಾವರಿ ಭೂಮಿಯ ಬೆಳೆ ನಷ್ಟಕ್ಕೆ ನಿಗದಿಪಡಿಸಿರುವ ಪರಿಹಾರದ ಮೊತ್ತಕ್ಕೆ ಹೋಲಿಸಿದರೆ, ರಾಜ್ಯ ಸರ್ಕಾರ ಘೋಷಿಸಿರುವ ಹೆಚ್ಚುವರಿ 2,500 ರೂ. ಪರಿಹಾರ ಅತ್ಯಲ್ಪವಾಗಿದೆ. ರಾಜ್ಯ ಸರ್ಕಾರ 1,200 ಕೋಟಿ ರೂ.ಬಿಡುಗಡೆ ಮಾಡುವುದಾಗಿ ಹೇಳಿದ್ದರೂ, ಘೋಷಣೆಯಷ್ಟೇ ಆಗಿದ್ದು ಹಣ ರೈತರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಸ್ಟಿಂಗ್‌ ಆಪರೇಷನ್‌ ವಿಚಾರವಾಗಿ ಮುಖ್ಯಮಂತ್ರಿ ತಮ ಸಚಿವ ಸಂಪುಟದ ಸದಸ್ಯರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬರಗಾಲದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆ ನಡೆಯಬೇಕಿತ್ತು ಎಂದು ಅವರು ಟೀಕಿಸಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌‍ ಎಸ್‌‍ಪಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಕ್ಕಿಂತ ಅಧಿಕಾರಿಗಳ ನಡುವಿನ ಸಂಘರ್ಷವೇ ಪ್ರಮುಖವಾಗಬಾರದು ಎಂದು ಅಭಿಪ್ರಾಯಪಟ್ಟರು.

ದಾಖಲೆ ಬಿಡುಗಡೆ ಮಾಡುವೆ: ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್‌ ಆಪರೇಷನ್‌ ಮತ್ತು ಪೆನ್‌ಡ್ರೈವ್‌ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ತಮ ಬಳಿ ಕೆಲವು ದಾಖಲೆಗಳಿವೆ. ನೀರಾವರಿ ಇಲಾಖೆಯಲ್ಲಿನ ಇಂಜಿನಿಯರ್‌ಗಳ ವರ್ಗಾವಣೆ ವಿಚಾರದಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ತಮ ಬಳಿ ಇವೆ. ಈ ವಿಚಾರದಲ್ಲಿ ತಾವು ಆಧಾರವಿಲ್ಲದೆ ಮಾತನಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಎಳೆದು ತರುವ ಮೂಲಕ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುಅವರು ಆಗ್ರಹಿಸಿದರು.ಶಾಸಕ ಎಚ್‌.ಡಿ. ರೇವಣ್ಣನವರು ಈ ಸಂದರ್ಭದಲ್ಲಿ ಇದ್ದರು.

RELATED ARTICLES
spot_img

Latest News