ನವದೆಹಲಿ,ಅ.11- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ಮತದಾರರ ಪಟ್ಟಿಗಳ ಪರಿಷ್ಕರಣೆ ಹಾಗೂ ತಿರುಚುವಿಕೆ ಆರೋಪಗಳ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದ ಜಿರಳೆ ಜನತಾ ಪಕ್ಷದ ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇಂದು ಬಿಡುಗಡೆ ಮಾಡಿದೆ.
ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿ ಕಾಪಾಡಬೇಕು ಮತ್ತು ಶಾಂತಿ ಭಂಗ ಉಂಟು ಮಾಡಬಾರದೆಂಬ ಷರತ್ತಿನ ಮೇಲೆ ಈ ಬಿಡುಗಡೆ ಮಾಡಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ನಿನ್ನೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಿಜೆಪಿ ಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಏರ್ ಇಂಡಿಯಾ ವಿಮಾನ ಇಳಿದ ಸ್ವಲ್ಪ ಸಮಯದ ಬಳಿಕವೇ ಪೊಲೀಸರು ವಶಕ್ಕೆ ಪಡೆದಿದ್ದರು.
ವಾಣಿಜ್ಯ ವಿಮಾನದಲ್ಲಿ ಪ್ರಯಾಣ ಮುಗಿಸಿ ಹೊರಬರುವ ಮುನ್ನವೇ ರಾಜಕೀಯ ನಾಯಕರನ್ನು ಬಂಧಿಸಿದ ಘಟನೆ ಸಾರ್ವಜನಿಕ ಹಾಗೂ ರಾಜಕೀಯ ವಲಯಗಳಲ್ಲಿ ಗಮನ ಸೆಳೆಯಿತು. ನಂತರ ಮೂವರನ್ನು ದೆಹಲಿ ಕಂಟೋನೆಂಟ್ ಪ್ರದೇಶದ ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆಯ ಬಳಿಕ ಶಾಂತಿ ಕಾಪಾಡುವ ಷರತ್ತಿನೊಂದಿಗೆ ಅವರನ್ನು ಬಿಡುಗಡೆ ಮಾಡಲಾಗಿದೆ.
ನಾಯಕರ ಬಿಡುಗಡೆಯ ಬಳಿಕ ಸಿಜೆಪಿಯ ಅಧಿಕೃತ ಎಕ್‌್ಸ ಖಾತೆಯಲ್ಲಿ, ಅಂತಿಮವಾಗಿ ದೆಹಲಿ ಪೊಲೀಸರು ಅಭಿಜೀತ್ ದೀಪ್ಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಬಿಡುಗಡೆ ಮಾಡಬೇಕಾಯಿತು. ಜಿರಳೆಗಳು ಎಂದಿಗೂ ಸಾಯುವುದಿಲ್ಲೞೞ ಎಂಬ ಸಂದೇಶ ಪ್ರಕಟವಾಯಿತು. ಇದನ್ನು ಪಕ್ಷವು ತನ್ನ ರಾಜಕೀಯ ಹೋರಾಟ ಮುಂದುವರಿಸುವ ಸಂಕೇತವಾಗಿ ಬಿಂಬಿಸಿದೆ.
ಸಿಜೆಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಯೂಟ್ಯೂಬರ್ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಧ್ರುವ್ ರಥೀ ಅವರನ್ನು ಗುರುಗ್ರಾಮ್‌ನಲ್ಲಿರುವ ಅವರ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು. ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಪ್ರತಿಭಟನೆಗೆ ಮುನ್ನವೇ ಪ್ರಮುಖ ನಾಯಕರು ಹಾಗೂ ಬೆಂಬಲಿಗರನ್ನು ವಶಕ್ಕೆ ಪಡೆದ ಕ್ರಮವು ರಾಜಕೀಯ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಸಭೆ ನಡೆಸುವ ಹಕ್ಕಿನ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಮತ್ತೊಂದೆಡೆ, ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದ ಪೊಲೀಸರು ಭದ್ರತೆ, ಸಂಚಾರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆಯನ್ನೇ ತಮ ಕ್ರಮಕ್ಕೆ ಕಾರಣವೆಂದು ಉಲ್ಲೇಖಿಸಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಮತದಾರರ ಪಟ್ಟಿಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಮತ್ತು ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಸಿಜೆಪಿ ಹಾಗೂ ಇತರ ಬೆಂಬಲಿಗರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ, ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗದ ನಿರ್ಧಾರಗಳನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿರುವುದು ಹೊಸದಲ್ಲ. ವಿವಿಧ ರಾಜ್ಯಗಳಲ್ಲಿ ಮತದಾರರ ಹೆಸರುಗಳ ಸೇರ್ಪಡೆ, ಕೈಬಿಡುವಿಕೆ ಮತ್ತು ಚುನಾವಣಾ ಪಾರದರ್ಶಕತೆ ಕುರಿತ ವಿವಾದಗಳು ಹಿಂದೆಯೂ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ.
ತಮ ಪ್ರಮುಖ ನಾಯಕರು ಬಿಡುಗಡೆಗೊಂಡ ಬೆನ್ನಲ್ಲೇ ಸಿಜೆಪಿ ಇಂದು ಬೆಳಿಗ್ಗೆ 10 ಗಂಟೆಗೆ ಜಂತರ್‌ಮಂತರ್‌ನಲ್ಲಿ ಮತ್ತೊಂದು ಜನಾಂದೋಲನ ನಡೆಸಲು ಕರೆ ನೀಡಿದ್ದು, ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರಿಸುವುದಾಗಿ ಪಕ್ಷ ಹೇಳಿದೆ.
