ನವದೆಹಲಿ,ಅ.11- ಜಿರಳೆ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆ ಹಾಗೂ ಜಂತರ್ ಮಂತರ್ 2.0 ಆಂದೋಲನದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ತುರ್ತು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದೆಹಲಿಯಾದ್ಯಂತ ಹಾಕಲಾಗಿರುವ ಬ್ಯಾರಿಕೇಡ್‌ಗಳನ್ನು ತಕ್ಷಣವೇ ತೆರವುಗೊಳಿಸಬೇಕು ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸದಂತೆ ನಿರ್ದೇಶನ ನೀಡಿದೆ.
ಇಂದು ಬೆಳಿಗ್ಗೆ ನ್ಯಾಯಮೂರ್ತಿ ಜೋಯ್ ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ.ಮೋಹನ ಅವರನ್ನೊಳಗೊಂಡ ಪೀಠವು ಅಸಾಧಾರಣ ಹಾಗೂ ತುರ್ತು ವಿಶೇಷ ಕಲಾಪ ನಡೆಸಿ ಈ ಕುರಿತು ವಿಚಾರಣೆ ಕೈಗೆತ್ತಿಕೊಂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ರಾಜಕೀಯ ನಾಯಕರು, ವಕೀಲರು ಹಾಗೂ ಮಾಧ್ಯಮ ಪ್ರತಿನಿಧಿಗಳ ಅಕ್ರಮ ಬಂಧನ, ಇಂಟರ್ನೆಟ್ ಅಭಾವ ಮತ್ತು ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಸಂಸ್ಥೆಯ ಮೇಲಿನ ನಂಬಿಕೆಯ ಬಗ್ಗೆ ಸಿಬಲ್ ವ್ಯಕ್ತಪಡಿಸಿದ ಆತಂಕಕ್ಕೆ ಸ್ಪಂದಿಸಿದ ಪೀಠವು, ಸಂಸ್ಥೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸಲು ನಾವು ಇಲ್ಲಿದ್ದೇವೆ ಎಂದು ಅಭಯ ನೀಡಿತು. ಪ್ರತಿಭಟನಾಕಾರರ ಸಂಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಆರಂಭದಲ್ಲಿ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವ ಪ್ರಸ್ತಾಪವಿತ್ತು. ಅಂತಿಮವಾಗಿ 45 ನಿಲ್ದಾಣಗಳನ್ನು ಮುಚ್ಚಲಾಗಿತ್ತು ಎಂಬ ಆರೋಪ ವಿಚಾರಣೆಯಲ್ಲಿ ಪ್ರಸ್ತಾಪವಾಯಿತು.
ಈ ಕ್ರಮದಿಂದ ಸಾರ್ವಜನಿಕರಿಗೆ ಉಂಟಾದ ತೊಂದರೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಮೆಟ್ರೋ ಮಾರ್ಗದ ಎರಡೂ ತುದಿಗಳಲ್ಲಿರುವ ನಿಲ್ದಾಣಗಳು ತೆರೆದಿದ್ದರೂ ಮಧ್ಯದ ನಿಲ್ದಾಣಗಳನ್ನು ಮುಚ್ಚಿದರೆ ಪ್ರಯಾಣಿಕರು ತಮ ಗಮ್ಯಸ್ಥಾನ ತಲುಪುವುದು ಹೇಗೆ ಎಂಬ ಪ್ರಶ್ನೆಯನ್ನು ನ್ಯಾಯಪೀಠ ಎತ್ತಿತು.
ಮುಚ್ಚಲ್ಪಟ್ಟ ಮತ್ತು ತೆರೆದಿದ್ದ ನಿಲ್ದಾಣಗಳ ವಿವರಗಳನ್ನು ಒಳಗೊಂಡ ನಕ್ಷೆಯನ್ನು ಸಲ್ಲಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಆಒಖಅ) ನ್ಯಾಯಾಲಯ ಸೂಚಿಸಿತು. ಮೆಟ್ರೋ ಸೇವೆಗಳು ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು ಎಂದೂ ತಿಳಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶನಿವಾರ ರಾತ್ರಿ 10 ಗಂಟೆಯೊಳಗೆ ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಪುನಃ ತೆರೆಯಲಾಗಿದ್ದು, ಇಂಟರ್ನೆಟ್ ಸೇವೆಗಳನ್ನೂ ಮರುಸ್ಥಾಪಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದ ಹೊರಗೂ, ರೈಲು ನಿಲ್ದಾಣಗಳ ಸಮೀಪದಲ್ಲಿಯೂ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಬಂಧಿತರಲ್ಲಿ ಕೆಲವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಆಕ್ಷೇಪಿಸಿದರು.
ಇಂಟರ್ನೆಟ್ ಸ್ಥಗಿತ ಮತ್ತು ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆ ನ್ಯಾಯಾಲಯದ ಹಿಂದಿನ ನಿರ್ದೇಶನಗಳಿಗೆ ವಿರುದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಮಧ್ಯಂತರ ಪರಿಹಾರ ನೀಡುವಂತೆಯೂ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಿಬಲ್ ಸೇರಿದಂತೆ ಹಿರಿಯ ವಕೀಲರು ನ್ಯಾಯಾಲಯದ ಮೊರೆ ಹೋಗುತ್ತಿರುವುದಕ್ಕೆ ನಿರಾಸೆ ವ್ಯಕ್ತಪಡಿಸಿರುವುದನ್ನು ಗಮನಿಸಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಅವರ ವಿಶ್ವಾಸವನ್ನು ಪುನಃಸ್ಥಾಪಿಸಲು ಬಯಸುವುದಾಗಿ ನ್ಯಾಯಪೀಠ ಹೇಳಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಆದರೆ, ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಯಾರ ವಿರುದ್ಧವಾದರೂ ಆದೇಶ ಹೊರಡಿಸುವ ಮೊದಲು ಸೂಕ್ತ ಅರ್ಜಿ ಮತ್ತು ದಾಖಲೆಗಳ ಅಗತ್ಯವಿದೆಯೇ ಎಂಬ ವಿಚಾರವನ್ನೂ ಜೋಯ್ ಮಲ್ಯ ಪ್ರಶ್ನಿಸಿದರು.
ಮೌಖಿಕವಾಗಿ ಪ್ರಸ್ತಾಪಿಸಲಾದ ಆರೋಪಗಳ ಆಧಾರದಲ್ಲಿ ಮಾತ್ರ ಕ್ರಮ ಕೈಗೊಳ್ಳುವ ಬದಲು, ಸಂಬಂಧಿತ ಸಾಕ್ಷ್ಯಗಳನ್ನು ಔಪಚಾರಿಕವಾಗಿ ದಾಖಲಿಸುವ ಪ್ರಕ್ರಿಯೆಯ ಅಗತ್ಯವನ್ನು ನ್ಯಾಯಾಲಯ ಒತ್ತಿಹೇಳಿತು.
ಇದು ಒಬ್ಬ ನಾಯಕನ ಬಂಧನದ ಪ್ರಶ್ನೆಯಲ್ಲ,
ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರು ವಿಚಾರಣೆಯಲ್ಲಿ ಮಹತ್ವದ ವಾದ ಮಂಡಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ರಾಜಕೀಯ ನಾಯಕರು, ಪತ್ರಕರ್ತರು, ವಕೀಲರು ಮತ್ತು ಸಾಮಾನ್ಯ ನಾಗರಿಕರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಆರೋಪಗಳ ನಿಖರ ಸಂಖ್ಯೆಯನ್ನು ಇಂಟರ್ನೆಟ್ ಸ್ಥಗಿತದಿಂದ ನಿರ್ಧರಿಸುವುದೇ ಕಷ್ಟವಾಗಿದೆ ಎಂದು ಅವರು ಹೇಳಿದರು.
ಇದು ಕೇವಲ ಒಬ್ಬ ರಾಜಕೀಯ ನಾಯಕ ಅಥವಾ ಕೆಲವು ಸಂಸದರು, ಮಾಜಿ ಮುಖ್ಯಮಂತ್ರಿಗಳ ಬಂಧನದ ಪ್ರಶ್ನೆಯಲ್ಲ; ನಾಗರಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಪ್ರಶ್ನೆಯಾಗಿದೆ ಎಂದು ಅವರು ವಾದಿಸಿದರು.
ಸುಮಾರು ಐದು ದಶಕಗಳ ಹಿಂದೆ, 1975ರಿಂದ 1977ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರಿಕರ ಸ್ವಾತಂತ್ರ್ಯ ಮತ್ತು ಹೇಬಿಯಸ್ ಕಾರ್ಪಸ್ ಅರ್ಜಿಗಳ ಕುರಿತು ನಡೆದ ನ್ಯಾಯಾಂಗ ಚರ್ಚೆಗಳನ್ನೂ ಅವರು ಪ್ರಸ್ತಾಪಿಸಿದರು. ಪ್ರಸ್ತುತ ಬೆಳವಣಿಗೆಗಳನ್ನು ಅದೇ ಐತಿಹಾಸಿಕ ಹಿನ್ನೆಲೆಯೊಂದಿಗೆ ಪರಿಶೀಲಿಸುವ ಅಗತ್ಯವಿದೆ ಎಂಬುದು ಅವರ ವಾದದ ಸಾರವಾಗಿತ್ತು.
ವಕೀಲರ ಸಂಘ ಹಾಗೂ ಸಾರಿಗೆ ಸಂಘಟನೆಗಳು ಸಹ ಪೊಲೀಸರ ದೌರ್ಜನ್ಯ ಮತ್ತು ಸಾರ್ವಜನಿಕ ಸಾರಿಗೆ ತಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ವೇಳೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಬಂದ್ ಮಾಡಲಾದ ನಿಲ್ದಾಣಗಳ ನಕ್ಷೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದ್ದು, ಶನಿವಾರ ರಾತ್ರಿಯೇ ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ತೆರೆಯಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ಮೆಟ್ರೋ ಸೇವೆ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
