ಬೆಂಗಳೂರು, ಅ.11- ಪೌರಾಡಳಿತ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವ ಹೆಚ್.ಸಿ.ಬಾಲಕೃಷ್ಣ ಇಂದು ಮುಜಾನೆ ಮಾಗಡಿಯ ಪುರಸಭೆ ಕಚೇರಿ ಮತ್ತು ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾರುಕಟ್ಟೆಗೆ ಭೇಟಿ ನೀಡಿದ ವೇಳೆೆಯಲ್ಲಿ ಕಸದರಾಶಿ ಕಂಡು ಸಿಟ್ಟಾದ ಸಚಿವರು, ಪೌರಾಯುಕ್ತ ಮತ್ತು ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ತಮ ಜೊತೆಯಲ್ಲೇ ಕಸದ ರಾಶಿಯ ಮೇಲೆ ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರು. ಇದನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪೋಸ್ಟ್ ಮಾಡುವಂತೆ ಸೂಚಿಸಿದರು. ಎರಡು, ಮೂರು ದಿನಗಳಾದರೂ ಹಳೆಯ ಕಸವನ್ನು ತೆಗೆಯದೇ ಉಳಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವ್ಯಾಪಾರಿಗಳೂ ತಮ ಸಮಸ್ಯೆಗಳನ್ನು ಹೇಳಿಕೊಂಡರು. ದೇವಸ್ಥಾನ ನಿರ್ಮಿಸಿಕೊಡುವಂತೆ ಕೇಳಿದಾಗ, ಸಕಾರಾತಕವಾಗಿ ಸ್ಪಂದಿಸಿದ ಸಚಿವರು, ಎಲ್ಲದಕ್ಕಿಂತ ಮೊದಲು ವ್ಯಾಪಾರಿಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇದಕ್ಕೆ ಅನುದಾನ ಬರುತ್ತಿದೆ ಎಂದು ಹೇಳಿದರು.
ಹೂವು, ಹಣ್ಣು, ತರಕಾರಿ ಮಾರುಕಟ್ಟೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಮಾಂಸ ಮಾರಾಟಕ್ಕೆ ಊರಿನಿಂದ ಹೊರಗೆ ಅವಕಾಶ ಕಲ್ಪಿಸಬೇಕು ಎಂದು ಸಚಿವರು ಸೂಚಿಸಿದರು.ಅಧಿಕಾರಿಗಳು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಇತರ ಮಾರುಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿ. ನಂತರ ಸ್ಥಳೀಯ ವ್ಯಾಪಾರಿಗಳ ಜೊತೆಯೂ ಚರ್ಚಿಸಿ ಅವರ ಅಗತ್ಯಕ್ಕನುಗುಣವಾಗಿ ಮಾರುಕಟ್ಟೆಗಳನ್ನು ವಿನ್ಯಾಸಗೊಳಿಸಬೇಕು ಎಂದು ಆದೇಶಿಸಿದರು.
ಇದಕ್ಕೂ ಮೊದಲು ಪುರಸಭೆಯ ಕಚೇರಿಗೆ ಭೇಟಿ ನೀಡಿದ ಸಚಿವರು, ತಡವಾಗಿ ಬಂದ ಆಯುಕ್ತರು ಹಾಗೂ ಇತರ ಅಧಿಕಾರಿಗಳಿಗೆ ಚಾಟಿ ಬೀಸಿದರು. ನಾನು ಪೌರಾಡಳಿತ ಸಚಿವ. ನನ್ನ ಊರಿನಲ್ಲೇ ವ್ಯವಸ್ಥೆ ಸರಿಯಿಲ್ಲ ಎಂದರೆ, ಬೇರೆಯವರಿಗೆ ಏನೆಂದು ಹೇಳಲಿ. ಇನ್ನೂ ಮುಂದೆ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಬೆಳಗ್ಗೆ 5.30ಕ್ಕೆಲ್ಲಾ ಕೆಲಸಕ್ಕೆ ಹಾಜರಾಗಬೇಕೆಂದು ಸೂಚನೆ ನೀಡಿದರು.
ಪೌರಾಯುಕ್ತರಿಗೆ ಮಾಗಡಿಯಲ್ಲೇ ವಾಸವಿರಬೇಕು ಎಂದು ಸೂಚಿಸಿದ್ದೇನೆ. ಆದರೆ ಅದನ್ನು ಪಾಲಿಸುತ್ತಿಲ್ಲ. ಮಾವನ ಮನೆಗೆ ಬಂದಂತೆ 11 ಗಂಟೆಗೆ ಬರುತ್ತಿದ್ದಾರೆ. ಆಯುಕ್ತರು ಒಂದು ಕಡೆ, ಆರೋಗ್ಯಾಧಿಕಾರಿಗಳು ಮತ್ತೊಂದು ಕಡೆ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೌರಾಯುಕ್ತರನ್ನು ಕಲಬುರಗಿಗೆ ವರ್ಗಾವಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪೌರ ಕಾರ್ಮಿಕರಿಗೆ ವೇತನ ನೀಡದೇ ಇರುವುದಕ್ಕೆ ಸಚಿವರು ಕಿಡಿಕಾರಿದರು. ಇದಕ್ಕೆ ಸಮಜಾಯಿಷಿ ನೀಡಿದ ಪೌರಾಯುಕ್ತರು, ಕಾಲ ಕಾಲಕ್ಕೆ ಪೌರ ಕಾರ್ಮಿಕರ ವೇತನಾನುದಾನ ಬಿಡುಗಡೆಯಾಗುತ್ತಿತ್ತು. ಆದರೆ ಎರಡು ತಿಂಗಳಿನಿಂದಲೂ ಅನುದಾನ ಬಂದಿಲ್ಲ. ಹೀಗಾಗಿ ವೇತನ ಬಾಕಿ ಇದೆ ಎಂದು ವಿವರಿಸಿದರು.
ತೆರಿಗೆ ಸಂಗ್ರಹ ಅಥವಾ ಬೇರೆ ಯಾವುದೇ ರೀತಿಯ ಮೂಲಗಳಿಂದ ಲಭ್ಯವಾಗುವ ಅನುದಾನನ್ನು ಮೊದಲು ಪೌರ ಕಾರ್ಮಿಕರ ವೇತನಕ್ಕೆ ಮೀಸಲಿಡಬೇಕು. ಸಂಪನೂಲ ಕ್ರೊಢೀಕರಿಸಿ ಹೆಚ್ಚಿನ ಆದ್ಯತೆ ನೀಡಬೇಕು. ನೂತನವಾಗಿ ನಿರ್ಮಿಸಿರುವ ಅಂಗಡಿ ಮಳಿಗೆಗೆಳನ್ನು ಹರಾಜು ಹಾಕಬೇಕೆಂದು ಸಚಿವರು ಸೂಚನೆ ನೀಡಿದರು.
