Homeರಾಜ್ಯವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ವಿದ್ಯುಕ್ತ ಚಾಲನೆ

ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ವಿದ್ಯುಕ್ತ ಚಾಲನೆ

ಮೈಸೂರು,ಅ.11- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 11.50 ರಿಂದ 12.13ರ ಧನುರ್‌ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ನಾಡಿನ ಸುಖ-ಶಾಂತಿ-ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಇಂದು ಮುಂಜಾನೆಯಿಂದಲೇ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಭಿಷೇಕ, ಕುಂಕುಮಾರ್ಚನೆ, ಅಷ್ಟೋತ್ತರ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.ಉದ್ಘಾಟನೆಗೂ ಮುನ್ನ ವಿವಿಧ ಜಾನಪದ ಕಲಾತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಹಾಗೆಯೇ ಮಹಿಷಾಸುರನ ಪ್ರತಿಮೆಯಿಂದ ವೇದಿಕೆಯವರೆಗೂ ವಿವಿಧ ಮಾದರಿಯ ಸುಂದರವಾದ ರಂಗೋಲಿಯನ್ನು ಬಿಡಿಸಲಾಗಿತ್ತು.

ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ದೇವಾಲಯಕ್ಕೆ ತೆರಳಿದ ಶ್ರೀಗಳು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ನಮಸ್ಕರಿಸಿ ಆನಂತರ ದಸರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ವೇದಿಕೆಯಲ್ಲಿ ಇರಿಸಲಾಗಿದ್ದ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಈಶ್ವರಖಂಡ್ರೆ, ಸಂಪುಟದ ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

200 ಕ್ಕೂ ಹೆಚ್ಚು ಸರ್ವಧರ್ಮ ಶ್ರೀಗಳ ಸಮಾಗಮ :
2026ರ ಮೈಸೂರು ದಸರಾ ಹೊಸ ಅಧ್ಯಾಯ ಬರೆದಿದೆ. ಇದೇ ಮೊದಲ ಬಾರಿಗೆ ದಸರಾ ಉದ್ಘಾಟನಾ ವೇದಿಕೆಯಲ್ಲಿ ಎಲ್ಲಾ ಧರ್ಮದ ಸ್ವಾಮೀಜಿಗಳು, ಗುರುಗಳು, ಫಾದರ್‌ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವ ಸರ್ಕಾರದ ಮೊದಲ ಅದ್ದೂರಿ ದಸರಾ ಇದಾಗಿದ್ದು, ಈ ಬಾರಿ 200ಕ್ಕೂ ಹೆಚ್ಚು ಧರ್ಮಗುರುಗಳಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

ಚಾಮುಂಡಿ ಬೆಟ್ಟದಲ್ಲಿ 2000 ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದರಲ್ಲಿ ಮೊದಲ ಸಾಲಿನಲ್ಲೇ ಸರ್ವಧರ್ಮದ ಗುರುಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲಾ ಶ್ರೀಗಳು, ಮಠಾಧೀಶರು ಹಾಗೂ ಧರ್ಮಗುರುಗಳ ಸಮುಖದಲ್ಲೇ ಚಾಮುಂಡಿ ತಾಯಿಗೆ ನಮನ ಸಲ್ಲಿಸಲಾಯಿತು. ಆನಂತರ ಮಧ್ಯಾಹ್ನ – ದಸರಾ ವಸ್ತು ಪ್ರದರ್ಶನ, ಫಲ ಪುಷ್ಪ ಪ್ರದರ್ಶನ ಉದ್ಘಾಟನೆ ನೆರವೇರಿತು.

ಹಬ್ಬದ ವಾತಾವರಣ :
ಇಡೀ ಸಾಂಸ್ಕೃತಿಕ ನಗರಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯ, ಹೊರರಾಜ್ಯ ಹಾಗೂ ಹೊರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಏಕತೆ ಸಾರುವ ದಸರಾ :
ಧಾರ್ಮಿಕ ಶ್ರದ್ಧೆ, ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಸಮಿಲನವಾಗಿರುವ ದಸರಾ ಕರ್ನಾಟಕದ ಹೆಮೆಯ ಉತ್ಸವವಾಗಿದೆ. ತಾಯಿ ಚಾಮುಂಡೇಶ್ವರಿ ಪೂಜೆಯೊಂದಿಗೆ ಆರಂಭಗೊಂಡಿರುವ ಈ ಬಾರಿಯ ದಸರಾ ಮಹೋತ್ಸವ ನಾಡಿನಲ್ಲಿ ಶಾಂತಿ-ಸೌಹಾರ್ದತೆ ಮತ್ತು ಸಮೃದ್ಧಿಯ ಸಂದೇಶವನ್ನು ಸಾರಲಿ ಎಂಬುದೇ ಆಶಯವಾಗಿದೆ.

ದಸರಾ ಸಂಭ್ರಮಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಮುಂದಿನ 11 ದಿನಗಳ ಕಾಲ ಅರಮನೆ ನಗರಿ, ಸಂಸ್ಕೃತಿ, ಕಲೆ, ಪರಂಪರೆ ಮತ್ತು ಪ್ರವಾಸೋದ್ಯಮ ವೈಭವಕ್ಕೆ ಸಾಕ್ಷಿಯಾಗಿದೆ. ಜಂಬೂ ಸವಾರಿ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳ ನಿರೀಕ್ಷೆಯೊಂದಿಗೆ ಮೈಸೂರು ನಗರವು ನಾಡಹಬ್ಬದ ಸಂಭ್ರಮದಲ್ಲಿ ಮಿಂದೇಳಲು ಸಜ್ಜಾಗಿದೆ. ಪ್ರತೀದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ತಾಲೀಮು ಭರದಿಂದ ಸಾಗಿದ್ದು ಐತಿಹಾಸಿಕ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ಭಾಷಣ

ಮೈಸೂರು, ಅ.11- ನವರಾತ್ರಿ ಆಚರಣೆಯನ್ನು ಕೊಪ್ಪಳ ಜಿಲ್ಲೆಯ ಗಂಡುಗಲಿ ಕುಮಾರರಾಮ ಆರಂಭಿಸಿದ್ದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ. ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 1,300 ರಿಂದ 1,328ರ ವರೆಗೂ ಆಳ್ವಿಕೆ ನಡೆಸಿದ ಕುಮಾರರಾಮ, ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಲು ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ದಸರಾ ಆಚರಣೆಯನ್ನು ಆರಂಭಿಸಿದ್ದರು ಎಂದು ಹೇಳಿದರು.
800 ವರ್ಷಗಳ ಇತಿಹಾಸವಿರುವ ಈ ಆಚರಣೆಯಲ್ಲಿ ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಭಾರತದ ಸೇನಾ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ದಸರಾ ಆಚರಣೆ ಕಲಾವಿದರ ಮತ್ತು ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಸೀಮಿತವಾಗಿಲ್ಲ. ದಸರಾ ಆಚರಣೆ ಕೊಪ್ಪಳದಲ್ಲಿ ನಡೆಯುತ್ತಿತ್ತು. ಆನೆಗಳ ಮೇಲೆ ಅಂಬಾರಿ ಸೇರಿದಂತೆ ಇತರ ಆಚರಣೆಗಳನ್ನು ಆ ವೇಳೆಯಲ್ಲಿ ಆರಂಭಿಸಲಾಯಿತು. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪಥನವಾದಾಗ ಅಂಬಾರಿ ಹಾಗೂ ಆನೆಯಂತಹ ಸಾಮರ್ಥ್ಯಗಳನ್ನು ನಿಭಾಯಿಸುವುದು ಯಾರಿಂದ ಸಾಧ್ಯ ಎಂಬ ಆಲೋಚನೆ ನಡೆಸಿ, ಮೈಸೂರಿನ ಮಹಾರಾಜರಿಗೆ ಒಪ್ಪಿಸಲಾಯಿತು. ಅಂದಿನಿಂದಲೂ ಈ ಆಚರಣೆ ನಿರಂತರವಾಗಿ ನಾಡ ಹಬ್ಬವಾಗಿ ಬೆಳೆದು ಬಂದಿದೆ ಎಂದು ಹೇಳಿದರು.

ಇದೇ ವೇಳೆ ಕೊಪ್ಪಳದ ಗವಿ ಗಂಗಾಧರೇಶ್ವರ ಜಾತ್ರೆಯನ್ನು ಸಚಿವರು ಸರಿಸಿಕೊಂಡರು. ದಕ್ಷಿಣದ ಕುಂಭಾಮೇಳ ಎನಿಸಿಕೊಂಡಿರುವ ಈ ಜಾತ್ರೆಗೆ 10 ಲಕ್ಷಕ್ಕೂ ಹೆಚ್ಚು ಜನ ಜಾತಿ, ಧರ್ಮ ಭೇದವಿಲ್ಲದೇ ಭಾಗವಹಿಸುತ್ತಾರೆ. ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿಗಳು ಅದರ ನೇತೃತ್ವವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆಂತಹ ಶ್ರೀಗಳು ಇಂದು ಮೈಸೂರು ದಸರಾವನ್ನು ಉದ್ಘಾಟಿಸುತ್ತಿರುವುದು ಹೆಮೆಯ ಸಂಗತಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಸ್ವಾತಂತ್ರ್ಯ ನಂತರ ಹೆಚ್ಚು ಅನುದಾನ ನೀಡಿದ್ದಾರೆ. ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅದೇ ರೀತಿ ಅಭಿವೃದ್ಧಿಗೆ ಸಹಕಾರ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಅವರು 5 ಗ್ಯಾರಂಟಿಗಳನ್ನು ನೀಡಿದ್ದರು. ಡಿ.ಕೆ.ಶಿವಕುಮಾರ್‌ ಭೂಮಿ ಎಂಬ 6ನೇ ಗ್ಯಾರಂಟಿಯನ್ನು ನೀಡಿದ್ದಾರೆ ಎಂದರಲ್ಲದೆ, ನಾಡ ಹಬ್ಬ ವೈವಿಧ್ಯತೆ, ಏಕತೆ, ಶಾಂತಿ, ಸೌಹಾರ್ಧತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರಿಯೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಗುರಿ ಮತ್ತು ಗುರು ಭಕ್ತಿ ಎರಡೂ ಇದೆ. ಅದರಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಆಧ್ಯಾತಿಕ ದೀಪ ಹಚ್ಚಿದ ಅಭಿನವ ಶ್ರೀಗಳಿಂದ ಇಂದು ದಸರಾ ಉದ್ಘಾಟನೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು. ಮೈಸೂರು ಸುಂದರವಾದ ನಗರ. ಆದರೆ ಹೊರ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು, ಒಳ ಚರಂಡಿಗಳಿಲ್ಲ, ತಮ ಚಾಮುಂಡಿ ಕ್ಷೇತ್ರಕ್ಕೆ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

RELATED ARTICLES
spot_img

Latest News