Homeರಾಜ್ಯದಸರಾ ರಜೆ ವೇಳೆ ಪರೀಕ್ಷೆ ನಿಗದಿ ವಿರೋಧಿಸಿ ಮಂಗಳೂರಿನ ಸೇಂಟ್‌ ಆಗ್ನೆಸ್‌‍ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ದಸರಾ ರಜೆ ವೇಳೆ ಪರೀಕ್ಷೆ ನಿಗದಿ ವಿರೋಧಿಸಿ ಮಂಗಳೂರಿನ ಸೇಂಟ್‌ ಆಗ್ನೆಸ್‌‍ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಮಂಗಳೂರು, ಅ. 12- ದಸರಾ ಹಬ್ಬದ ರಜೆಯ ಅವಧಿಯಲ್ಲಿ ಸೆಮಿಸ್ಟರ್‌ ಪರೀಕ್ಷೆಗಳನ್ನು ನಿಗದಿಪಡಿಸಿರುವ ಕಾಲೇಜು ಆಡಳಿತ ಮಂಡಳಿಯ ನಿರ್ಧಾರವನ್ನು ವಿರೋಧಿಸಿ, ಮಂಗಳೂರಿನ ಸೇಂಟ್‌ ಆಗ್ನೆಸ್‌‍ ಕಾಲೇಜಿನ ಪದವಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.

ಪರೀಕ್ಷೆಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜಿನ ಪ್ರವೇಶ ದ್ವಾರದ ಹೊರಗೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಾಲೇಜು ಆಡಳಿತ ಮಂಡಳಿಯು ಅಕ್ಟೋಬರ್‌ 12ರಿಂದ 28ರವರೆಗೆ ಸೆಮಿಸ್ಟರ್‌ ಪರೀಕ್ಷೆಗಳನ್ನು ನಿಗದಿಪಡಿಸಿದೆ. ಆದರೆ, ಈ ಅವಧಿಯು ದಸರಾ ಹಬ್ಬದ ಸಂಭ್ರಮಾಚರಣೆಗೆ ಅಡ್ಡಿಯಾಗಲಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ಸಂಪ್ರದಾಯಗಳು ಮತ್ತು ಹಬ್ಬದ ಆಚರಣೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಬದಲಾಯಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಬೆಂಬಲದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಮಸ್ಯೆಯಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಚದುರಿಸಲು ಪೊಲೀಸರು ಪ್ರಯತ್ನಿಸಿದರೂ ಕಾಲೇಜಿನ ಹೊರಗೆ ಪ್ರತಿಭಟನೆ ಮುಂದುವರಿಯಿತು. ಇದೇ ವೇಳೆ, ಪರೀಕ್ಷೆ ಬರೆಯಲು ನಿರ್ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದವು.

ಪರೀಕ್ಷೆ ಬಹಿಷ್ಕರಿಸಿದರೆ ಶೈಕ್ಷಣಿಕವಾಗಿ ತೊಂದರೆ ಅಥವಾ ದಂಡಾತಕ ಕ್ರಮ ಎದುರಾಗಬಹುದೇ ಎಂಬ ಆತಂಕ ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಮೂಡಿದೆ. ದಸರಾ ರಜೆ ವೇಳೆ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯ ನಡುವಿನ ವಿವಾದ ಮುಂದುವರಿದಿದ್ದು, ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES
spot_img

Latest News