ವಾಷಿಂಗ್ಟನ್, ಅ.15- ಅಮೆರಿಕದ ಇಲಿನಾಯ್ಸ್ ರಾಜ್ಯದ ಅರೋರಾದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂದು ಗುರುತಿಸಲಾಗಿದೆ. ತನಿಖೆಯ ವೇಳೆ ಬಿಳಿಯರ ಶ್ರೇಷ್ಠತಾವಾದಿ ವಿಚಾರಧಾರೆಗಳನ್ನು ಪ್ರತಿಪಾದಿಸುವ ಹಾಗೂ ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ದಾಖಲೆಯೊಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಪೊರಾಕಿಸ್ ಕಳುಹಿಸಿದ್ದ ಎಲೆಕ್ಟ್ರಾನಿಕ್ ಸಂದೇಶಗಳನ್ನು ಸ್ವೀಕರಿಸಿದ ವ್ಯಕ್ತಿಯೊಬ್ಬರು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಆರಂಭವಾಯಿತು. ಸಾಮೂಹಿಕ ಗುಂಡಿನ ದಾಳಿ ನಡೆಸುವ ಯೋಜನೆಯನ್ನು ವಿವರಿಸುವ ದಾಖಲೆ ಹಾಗೂ ರೈಫಲ್, ಮ್ಯಾಗಜೀನ್ಗಳು, ದೇಹದ ರಕ್ಷಣಾ ಕವಚ ಮತ್ತು ಇತರ ಯುದ್ಧತಂತ್ರದ ಉಪಕರಣಗಳ ಚಿತ್ರಗಳನ್ನು ಆತ ಹಂಚಿಕೊಂಡಿದ್ದ ಎನ್ನಲಾಗಿದೆ.
ಅ.11ರಂದು ಪಪೊರಾಕಿಸ್ ತನ್ನ ಮನೆಯಿಂದ ಹೊರಡುತ್ತಿದ್ದ ಸಂದರ್ಭದಲ್ಲಿ ಪ್ಯಾಲಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದರು.
ಮನೆಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಪತ್ತೆ
ಆರೋಪಿಯ ನಿವಾಸದಲ್ಲಿ ನಡೆಸಿದ ಶೋಧದ ವೇಳೆ ಒಂದು ರೈಫಲ್, ಹಲವು ತುಂಬಿದ ಮ್ಯಾಗಜೀನ್ಗಳು, ನೂರಾರು ಸುತ್ತು ಮದ್ದುಗುಂಡುಗಳು ಹಾಗೂ ಯುದ್ಧತಂತ್ರದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಹದ ರಕ್ಷಣಾ ಕವಚವಿರುವ ಉಡುಪು ಮತ್ತು ಬಿಳಿಯರ ಶ್ರೇಷ್ಠತಾವಾದಿ ಉಗ್ರವಾದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹೊಂದಿರುವ ಪ್ಯಾಚ್ ಕೂಡ ಪತ್ತೆಯಾಗಿದೆ ಎಂದು ವರದಿಯಾಗಿದೆ.
ತನಿಖಾಧಿಕಾರಿಗಳು ಪರಿಶೀಲಿಸಿದ ದಾಖಲೆಗೆ ‘ನಾನು ಏಕೆ ಹೋರಾಡಿದೆ: ಅರೋರಾ ಶೂಟರ್ನ ಪ್ರಣಾಳಿಕೆ’ ಎಂಬ ಶೀರ್ಷಿಕೆ ಇತ್ತು ಎನ್ನಲಾಗಿದೆ. ಇದರಲ್ಲಿ ದಕ್ಷಿಣ ಏಷ್ಯಾ ಮೂಲದ ಜನರು, ವಿಶೇಷವಾಗಿ ಭಾರತೀಯರ ವಿರುದ್ಧ ಹಿಂಸಾಚಾರದ ಉಲ್ಲೇಖಗಳಿದ್ದವು ಎಂದು ಪೊಲೀಸರು ಆರೋಪಿಸಿದ್ದಾರೆ.
ಆದರೆ, ದಾಳಿ ನಡೆಸಲು ಉದ್ದೇಶಿಸಿದ್ದ ನಿರ್ದಿಷ್ಟ ಹಿಂದೂ ದೇವಾಲಯವನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ. ಪಪೊರಾಕಿಸ್ ವಿರುದ್ಧ ಭಯೋತ್ಪಾದಕ ಬೆದರಿಕೆ ಒಡ್ಡಿದ ಆರೋಪ ಹಾಗೂ ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪಗಳನ್ನು ದಾಖಲಿಸಲಾಗಿದೆ. 16 ಇಂಚುಗಳಿಗಿಂತ ಕಡಿಮೆ ಉದ್ದದ ಬ್ಯಾರೆಲ್ ಹೊಂದಿರುವ ರೈಫಲ್ ಹೊಂದಿದ್ದ ಆರೋಪವೂ ಇದರಲ್ಲಿ ಸೇರಿದೆ.
ಅ.15ರಂದು ನಡೆದ ನ್ಯಾಯಾಲಯದ ವಿಚಾರಣೆಯ ಬಳಿಕ ನ್ಯಾಯಾಧೀಶರು ಆರೋಪಿಯನ್ನು ಬಂಧನದಲ್ಲಿಡಲು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಗೆ ಅಕ್ಟೋಬರ್ 30ರಂದು ಹಾಜರುಪಡಿಸುವ ನಿರೀಕ್ಷೆಯಿದೆ. ಪ್ರಕರಣದ ತನಿಖೆಗಾಗಿ ಎಫ್ಬಿಐನೊಂದಿಗೆ ಸಹಕರಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
