ಬೆಂಗಳೂರು, ಅ.15- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಸಕ್ಕರೆ ಬೆಲೆಯನ್ನು ಹೆಚ್ಚಿಸಬೇಕು, ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂಬ ಆಗ್ರಹ ಮತ್ತಷ್ಟು ತೀವ್ರವಾಗಿವೆ.
ಹುಬ್ಬಳ್ಳಿ ಧಾರವಾಡದಲ್ಲಿಂದು ರೈತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.ಬೆಳಕಾವಿ, ಹುಬ್ಬಳ್ಳಿ- ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ, ಕಲಬುರ್ಗಿ, ರಾಯಚೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ದಿನೇ ದಿನೇ ಕಾವೇರತೊಡಗಿವೆ. ಕಬ್ಬಿಗೆ ಆರು ಸಾವಿರ ರೂಪಾಯಿ ಎಫ್ ಆರ್ ಪಿ ದರ ನಿಗದಿಪಡಿಸಬೇಕು, ಪ್ರತಿ ಕೆಜಿ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ 60 ರೂ. ನಿಗದಿಪಡಿಸಬೇಕು, ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಸಂಪೂರ್ಣ ಖರೀದಿಸಬೇಕು, ರೈತರ ಶ್ರೇಯೋಭಿವೃದ್ಧಿಗೆ ಸ್ವಾಮಿನಾಥನ್ ವರದಿಯನ್ನು ಯಥಾವತ್ತು ಜಾರಿಗೊಳಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆರಂಭವಾದ ಕಬ್ಬು ಬೆಳೆಗಾರರ ಹೆದ್ದಾರಿ ತಡೆ ಪ್ರತಿಭಟನೆ ಮುಂದುವರೆದಿದೆ.
ಈಗ ಹೊಸದಾಗಿ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಯು ಸೇರ್ಪಡೆಯಾಗಿದೆ. ಬೆಳಗಾವಿಯ ಹುತ್ತರಗಿ, ಹಿರೇ ಬಾಗೇವಾಡಿ ಸೇರಿದಂತೆ ಮೂರು ಕಡೆ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ರಾಯಚೂರು, ಬೀದರ್ ನಲ್ಲಿ ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ. ಬಾಗಲಕೋಟೆಯಲ್ಲಿ ಕೆಲವು ಕಡೆ ಪ್ರತಿಭಟನೆಗಳಾದರೆ, ಇನ್ನೂ ಕೆಲವು ಕಡೆ ಕೇಂದ್ರ ಸರಕಾರಕ್ಕೆ ನೀಡಿರುವ ಗಡುವನ್ನು ಕಾದು ನೋಡಲಾಗುತ್ತಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಭಾಗದಲ್ಲಿ ಸಾಂಕೇತಿಕ ಪ್ರತಿಭಟನೆಗಳಾಗಿವೆ.
ಗದಗ, ಕಲಬುರಗಿಯಲ್ಲಿ ರಾಜ್ಯ ಹೆದ್ದಾರಿಗಳನ್ನು ತಡೆದು ಪ್ರತಿಭಟಿಸಲಾಗಿದೆ. ಗಡಿ ಜಿಲ್ಲೆಗಳಾದ ಬೆಳಗಾವಿಯಲ್ಲಿ ರೈತರು ಹೆದ್ದಾರಿಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ರಸ್ತೆಯಲ್ಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದಾರೆ. ಅಹೋರಾತ್ರಿ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಎತ್ತಿನ ಗಾಡಿಗಳು ಹಾಗೂ ಜಾನುವಾರುಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಲಾಗಿದೆ.ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು ಪ್ರತಿಭಟನೆಗೆ ಬೆಂಬಲ ನೀಡಿ, ಖುದ್ದು ಭಾಗವಹಿಸಿರುವುದರಿಂದ ಮತ್ತಷ್ಟು ಬಲ ಬಂದಂತಾಗಿದೆ.
ಕೆಲವು ಕಡೆ ಪ್ರತಿಭಟನಾಕಾರರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜೀನಾಮೆಗೆ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ನಡೆದ ರೈತರೊಂದಿಗೆ ಸಭೆ ವಿಫಲವಾದ ಬಳಿಕ ಮಂಗಳವಾರ ಮಧ್ಯರಾತ್ರಿಯಿಂದಲೇ ರೈತರು ಪ್ರತಿಭಟನೆ ಆರಂಭಿಸಿದರು.ಮೂರು ದಿನ ಕಳೆದರೂ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವ ಪ್ರತಿನಿಧಿಯು ತಮನ್ನು ಭೇಟಿ ಮಾಡದೆ ಇರುವುದಕ್ಕೆ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ.
ಪ್ರತಿಭಟನಾ ನಿರತ ರೈತರು ರಾಜ್ಯ ಸರ್ಕಾರದ ವಿರುದ್ಧವು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿ ಟನ್ ಕಬ್ಬಿಗೆ ಒಂದು ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಕೃಷಿಗೆ ದಿನಕ್ಕೆ 8 ಗಂಟೆ 3 ಫೇಸ್ ವಿದ್ಯುತ್ ಪೂರೈಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹೆದ್ದಾರಿ ಬಂದ್ ನಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬೇಡಿಕೆ ಈಡೇರುವವರೆಗೂ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ.
