ಮುಂಬೈ, ಅ.15 ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ಖಾನ್ ಅವರ ಸೋದರಳಿಯ ಹಾಗು ಚಿತ್ರನಟ ಇಮ್ರಾನ್ ಖಾನ್ ಅವರಿಗೆ ಅ.28ರೊಳಗೆ ದೇಶ ತೊರೆಯುವಂತೆ ಮುಂಬೈ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಖಾನ್ ಕಾಣಿಸಿಕೊಂಡಿದ್ದ ವೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇಮ್ರಾನ್ ಖಾನ್ ಭಾರತೀಯ ಪ್ರಜೆಯಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪವಿರುವುದರಿಂದ, ವಲಸೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ವರದಿಗಳ ಪ್ರಕಾರ, ಇಮ್ರಾನ್ ಖಾನ್ ಅಮೆರಿಕದ ಪ್ರಜೆಯಾಗಿದ್ದು, ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಹೊಂದಿದ್ದಾರೆ.ಇದಕ್ಕೂ ಮುನ್ನ, ಮಾಜಿ ಬಿಜೆಪಿ ಸಂಸದ ಕಿರಿಟ್ ಸೋಮಯ್ಯ ಅವರು ಮುಂಬೈ ಪೊಲೀಸರಿಗೆ ಪತ್ರ ಬರೆದು, ಇಮ್ರಾನ್ ಖಾನ್ ವಿದೇಶಿ ಪ್ರಜೆ ಆಗಿದ್ದರೂ,ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಮುಂಬೈ ಜಂಟಿ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ಶರ್ಮಾ ಅವರಿಗೆ ಬರೆದ ಪತ್ರದಲ್ಲಿ, ಇಂತಹ ಪ್ರತಿಭಟನೆಯಲ್ಲಿ ಭಾಗವಹಿಸಲು ಖಾನ್ ಅವರಿಗೆ ಕಾನೂನುಬದ್ಧ ಅನುಮತಿ ಇದೆಯೇ ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದರು.
ಖಾನ್ ಒಬ್ಬ ವಿದೇಶಿ ಪ್ರಜೆ ಎಂದು ಹೇಳಿರುವ ಸೋಮಯ್ಯ, ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಅನುಮತಿ ಪಡೆದಿದ್ದರೇ ಎಂದು ಪ್ರಶ್ನಿಸಿದ್ದಾರೆ.ಈ ವಿಷಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೋಮಯ್ಯ ಮುಂಬೈ ಪೊಲೀಸರನ್ನು ಕೋರಿದ್ದಾರೆ.
