ಬೆಂಗಳೂರು,ಅ.15-ಬಟ್ಟೆ ಶೋರೂಂಗೆ ಸೀರೆ ಖರೀದಿಸುವ ನೆಪದಲ್ಲಿ ಹೋಗಿ ದುಬಾರಿ ಬೆಲೆಯ ಪೈಥಾನಿ ಸೀರೆಗಳನ್ನು ಕಳವು ಮಾಡಿದ್ದ ಮಹಿಳೆಯಿಂದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬರೋಬ್ಬರಿ 6 ಲಕ್ಷ ಮೌಲ್ಯದ ಮೂರು ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯಾರಣ್ಯಪುರದ ನಿವಾಸಿ ಲತಾ (36) ಎಂಬ ಮಹಿಳೆ ಇನ್ಫೆಂಟ್ರಿ ರಸ್ತೆಯ ಪ್ಲಾಜಾವೊಂದರಲ್ಲಿರುವ ಬಟ್ಟೆ ಶೋರೂಂ ಗೆ ಮಗುವನ್ನು ಕರೆದುಕೊಂಡು ಆಗಾಗ್ಗೆ ಹೋಗುತ್ತಿದ್ದರು. ಆ ಸಂದಭದಲ್ಲಿ ಮಾಲೀಕರನ್ನು ಚೆನ್ನಾಗಿ ಮಾತನಾಡಿಸುತ್ತಿದ್ದರಿಂದ ಇವರಿಗೆ ಪರಿಚಯವಾಗಿದೆ.
ಈ ಮಹಿಳೆ ಸೀರೆ ಅಂಗಡಿಗೆ ಹೋಗಿ ಕಡಿಮೆ ಬೆಲೆಯ ಸೀರೆ ಖರೀದಿಸುವ ಜೊತೆಗೆ ಲಕ್ಷಾಂತರ ಬೆಲೆಯ ಪೈಥಾನಿ ಸೀರೆಯನ್ನು ಕಳವು ಮಾಡಿದ್ದಾಳೆ.ಈ ಮಹಿಳೆ ಆಗಾಗ್ಗೆ ಅಂಗಡಿಗೆ ಹೋಗುತ್ತಿದ್ದುದ್ದರಿಂದ ಮಾಲೀಕರಿಗೆ ಈ ಬಗ್ಗೆ ಅನುಮಾನ ಬಂದಿಲ್ಲ.
ಮತ್ತೊಂದು ದಿನ ಅದೇ ಅಂಗಡಿಗೆ ಹೋಗಿ ಪೈಥಾನಿ ಸೀರೆ ತೋರಿಸುವಂತೆ ಮಹಿಳೆ ಕೇಳಿದಾಗ ಅಂಗಡಿ ಮಾಲೀಕರು ಆ ಸೀರೆಯನ್ನು ಗಮನಿಸಿದ್ದಾರೆ. ಆದರೆ ಆ ಸೀರೆ ಇರಲಿಲ್ಲ.
ಗ್ರಾಹಕರು ಯಾರಾದರೂ ಶಾಪಿಂಗ್ ಮಾಡಿರಬಹುದೆಂದು ಕಂಪ್ಯೂಟರ್ನಲ್ಲಿ ಇಂಡೆಂಟ್ ಪರಿಶೀಲಿಸಿದಾಗ ಒಂದು ಸೀರೆ ಮಾತ್ರ ಮಾರಾಟವಾಗಿದ್ದು, ಇನ್ನೊಂದು ಸೀರೆ ಇರಬೇಕಾಗಿತ್ತು. ಆದರೆ ಅಂಗಡಿಯಲ್ಲಿ ಆ ಸೀರೆ ಇರಲಿಲ್ಲ.
ಆ ಸಂದರ್ಭದಲ್ಲಿ ಮಾಲೀಕರಿಗೆ ಅನುಮಾನ ಬಂದಿದೆ. ನಂತರದ ದಿನದಲ್ಲಿ ಅಂಗಡಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಈ ಮಹಿಳೆ ಪೈಥಾನಿ ಸೀರೆಗಳನ್ನು ಕಳವು ಮಾಡಿರುವುದು ಗೊತ್ತಾ ಗಿದೆ.
ತಕ್ಷಣ ಮಾಲೀಕರು ಕಮರ್ಷಿ ಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ದೃಶ್ಯಾವಳಿಯನ್ನಾಧರಿಸಿ ಜಾಲಹಳ್ಳಿಯ ರಾಮಚಂದ್ರ ಪುರದಲ್ಲಿ ವಾಸವಿರುವ ಮಹಿಳೆಗೆ ನೋಟೀಸ್ ಕಳುಹಿಸಿದ್ದಾರೆ.
ಆ ಮಹಿಳೆಯು ಮರುದಿನ ಮೂರು ಪೈಥಾನಿ ಸೀರೆಗಳೊಂದಿಗೆ ಠಾಣೆಗೆ ಹಾಜರಾಗಿ ಈ ಸೀರೆಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾಳೆ.ಪೊಲೀಸರು ಮಹಿಳೆಯಿಂದ 6 ಲಕ್ಷ ಬೆಲೆಯ ಮೂರು ಪೈಥಾನಿ ಸೀರೆಗಳನ್ನು ವಶಕ್ಕೆ ಪಡೆದು ನಂತರ ಆಕೆಗೆ ಸೂಕ್ತ ತಿಳುವಳಿಕೆ ನೀಡಿ ಕಳುಹಿಸಿದ್ದಾರೆ.ಈ ಕಾರ್ಯಾಚರಣೆಯನ್ನು ಇನ್್ಸಪೆಕ್ಟರ್ ಫಿರೋಜ್ ಮಹಮದ್ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
