Homeರಾಷ್ಟ್ರೀಯಶಹೀದ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಬೋಗಿಯಲ್ಲಿ ಬೆಂಕಿ ; ಪ್ರಯಾಣಿಕರು ಪಾರು

ಶಹೀದ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಬೋಗಿಯಲ್ಲಿ ಬೆಂಕಿ ; ಪ್ರಯಾಣಿಕರು ಪಾರು

ಲಖನೌ, ಅ.24- ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಜೀಬಾಬಾದ್ ಸಮೀಪ ಶಹೀದ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಬೋಗಿಯಲ್ಲಿ ಇಂದು ರಾತ್ರಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿದೆ.ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬೆಂಕಿಯಿಂದ ಬೋಗಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಕುಮಾರ್ ತಿಳಿಸಿದ್ದಾರೆ.

ಕಳೆದ ರಾತ್ರಿ ಸುಮಾರು 11 ಗಂಟೆ ವೇಳೆಗೆ ನಜೀಬಾಬಾದ್‌ನಿಂದ ಲಖನೌಗೆ ತೆರಳುತ್ತಿದ್ದ ರೈಲಿನ ಎಸ್-6 ಸ್ಲೀಪರ್ ಬೋಗಿಯಲ್ಲಿ ಹೊಗೆ ಹಾಗೂ ಬೆಂಕಿಯ ಕಿಡಿಗಳು ಕಾಣಿಸಿಕೊಂಡವು.ನಜೀನಾ ರೈಲು ನಿಲ್ದಾಣಕ್ಕೂ ಮುನ್ನ ಕೊತ್ವಾಲಿ ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರು ಹೊಗೆಯನ್ನು ಗಮನಿಸಿದರು. ತಕ್ಷಣ ತುರ್ತು ಸರಪಳಿ ಎಳೆದು ರೈಲನ್ನು ನಿಲ್ಲಿಸಿದರು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು 30 ನಿಮಿಷಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಎಂದು ಕುಮಾರ್ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೋಗಿಯಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.

ಬಾಧಿತ ಬೋಗಿಯನ್ನು ಬರೇಲಿಯಲ್ಲಿ ಮತ್ತೊಂದು ಬೋಗಿಯೊಂದಿಗೆ ಬದಲಾಯಿಸಲಾಯಿತು.ಘಟನೆಗೆ ಕಾರಣವೇನು ಎಂಬುದರ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES
spot_img

Latest News