Homeರಾಜ್ಯಹಾಸನಾಂಬೆ ದೇವಿಯ ಅಮೂಲ್ಯ ಆಭರಣ ರವಾನೆ

ಹಾಸನಾಂಬೆ ದೇವಿಯ ಅಮೂಲ್ಯ ಆಭರಣ ರವಾನೆ

ಹಾಸನ,ಅ.27- ಹಾಸನಾಂಬೆ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಿಯ ಅಮೂಲ್ಯ ಆಭರಣಗಳು ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಹಾಸನಾಂಬೆ ದೇವಾಲಯಕ್ಕೆ ಪೊಲೀಸ್‌‍ ಬಂದೋಬಸ್ತ್‌ನಲ್ಲಿ ಕೊಂಡೊಯ್ಯಲಾಯಿತು.

ಆಭರಣಗಳನ್ನು ದೇವಾಲಯಕ್ಕೆ ರವಾನಿಸುವ ಮುನ್ನ ಉಪವಿಭಾಗಾಧಿಕಾರಿ ಜಗದೀಶ್‌ ಗಂಗಣ್ಣನವರ್‌, ತಹಶೀಲ್ದಾರ್‌ ಗೀತಾ ಹಾಗೂ ಪ್ರಧಾನ ಅರ್ಚಕ ನಾಗರಾಜ್‌ ಅವರು ಆಭರಣಗಳ ಪೆಟ್ಟಿಗೆಗೆ ಪೂಜೆ ಸಲ್ಲಿಸಿದರು. ಬಳಿಕ ವಿಶೇಷ ವಾಹನದಲ್ಲಿ ಆಭರಣಗಳನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಆರ್‌.ಸಿ. ರಸ್ತೆ, ಎನ್‌.ಆರ್‌. ವತ್ತ ಹಾಗೂ ಗಾಂಧಿ ಬಜಾರ್‌ ಮಾರ್ಗವಾಗಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ದೇವಾಲಯದ ಆವರಣದಲ್ಲಿ ಆಭರಣಗಳನ್ನು ಇರಿಸಿದ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವದ ಮುಂದಿನ ಧಾರ್ಮಿಕ ಕಾರ್ಯಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಮಾತನಾಡಿದ ತಹಶೀಲ್ದಾರ್‌ ಗೀತಾ, ಹಾಸನಾಂಬೆ ದೇವಿಯ ಆಭರಣಗಳನ್ನು ಇದುವರೆಗೆ ಜಿಲ್ಲಾ ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಖಜಾನೆಯಲ್ಲಿ ಪೂಜೆ ಸಲ್ಲಿಸಿ, ವಿಶೇಷ ವಾಹನದಲ್ಲಿ ಪೊಲೀಸ್‌‍ ಭದ್ರತೆಯೊಂದಿಗೆ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ಅ.29 ರಿಂದ ಜಾತ್ರಾ ಮಹೋತ್ಸವ:
ಹಾಸನಾಂಬೆ ದೇವಾಲಯದ ಬಾಗಿಲು ಅ. 29ರಂದು ತೆರೆಯಲಿದ್ದು, ಅದಕ್ಕೂ ಹಿಂದಿನ ದಿನ ಅರ್ಚಕರು ದೇವಿಯ ಆಭರಣಗಳನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ದೇವಿಗೆ ಅರ್ಪಿಸಿ ಮುಂದಿನ ಪೂಜಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎಂದರು.ಅ. 29ರಿಂದ ನ. 11ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.

RELATED ARTICLES

Latest News