Homeರಾಜ್ಯ1,000 ರೂ.ಕ್ಕಿಂತ ಹೆಚ್ಚಿನ ಮದ್ಯ ಖರೀದಿಗೆ ಡಿಜಿಟಲ್‌ ಪೇಮೆಂಟ್ ಕಡ್ಡಾಯ

1,000 ರೂ.ಕ್ಕಿಂತ ಹೆಚ್ಚಿನ ಮದ್ಯ ಖರೀದಿಗೆ ಡಿಜಿಟಲ್‌ ಪೇಮೆಂಟ್ ಕಡ್ಡಾಯ

ಚೆನ್ನೈ,ಅ.27- ಪಾರದರ್ಶಕತೆ ಮತ್ತು ಕಾರ್ಯನಿರ್ವಹಣಾ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ತಮಿಳುನಾಡು ರಾಜ್ಯ ಸ್ವಾಮ್ಯದ ಟಾಸಾಕ್‌‍ಸಂಸ್ಥೆಯು 1,000ಕ್ಕಿಂತ ಹೆಚ್ಚಿನ ಮೌಲ್ಯದ ಮದ್ಯ ಖರೀದಿಗೆ ನ.1ರಿಂದ ಡಿಜಿಟಲ್‌ ಪಾವತಿಯನ್ನು ಕಡ್ಡಾಯಗೊಳಿಸಿದೆ.

ಟಾಸ್ಮಾಕ್‌ನ ಅಧಿಕೃತ ಸುತ್ತೋಲೆಯನ್ನು ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ಇಂದು ಈ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಪ್ರಸ್ತುತ 4,048 ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ. ಮದ್ಯ ಖರೀದಿಗೆ ಈಗಾಗಲೇ ಯುಪಿಐ, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ಪಾವತಿ ಮಾಡುವ ಅವಕಾಶವಿದ್ದರೂ, ಹೆಚ್ಚಿನ ವಹಿವಾಟುಗಳು ನಗದು ರೂಪದಲ್ಲೇ ನಡೆಯುತ್ತಿವೆ.

ಪ್ರತಿದಿನ ದೊಡ್ಡ ಪ್ರಮಾಣದ ನಗದು ನಿರ್ವಹಿಸುವುದರಿಂದ ಸಿಬ್ಬಂದಿಗೆ ಹಣ ಸಾಗಿಸುವ ವೇಳೆ ಸುರಕ್ಷತಾ ಅಪಾಯ, ಲೆಕ್ಕಪತ್ರದಲ್ಲಿ ವ್ಯತ್ಯಾಸ ಹಾಗೂ ನಕಲಿ ನೋಟುಗಳ ಅಪಾಯ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.

ಗರಿಷ್ಠ ಚಿಲ್ಲರೆ ದರ (ಎಂಆರ್‌ಪಿ)ಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳು ಪದೇಪದೇ ಬರುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಇದರಿಂದ ಪ್ರತಿಯೊಂದು ವಹಿವಾಟು ನಿಖರ ಸಮಯ ಮತ್ತು ಮೊತ್ತದೊಂದಿಗೆ ತಕ್ಷಣವೇ ದಾಖಲಾಗಲಿದ್ದು, ಅಧಿಕ ದರ ವಸೂಲಿಯನ್ನು ತಡೆಯಲು ಹಾಗೂ ಮಾರಾಟದ ಹಣವನ್ನು ನೇರವಾಗಿ ಅಧಿಕೃತ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News