Homeರಾಷ್ಟ್ರೀಯಕರಿದ ಎಣ್ಣೆಯ ಮರುಬಳಕೆ ತಡೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಲು ಒತ್ತಾಯ

ಕರಿದ ಎಣ್ಣೆಯ ಮರುಬಳಕೆ ತಡೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಲು ಒತ್ತಾಯ

ನವದೆಹಲಿ,ಅ.29- ಕರಿದ ಅಡುಗೆ ಎಣ್ಣೆಯನ್ನು ಪದೇಪದೇ ಆಹಾರ ತಯಾರಿಕೆಗೆ ಬಳಸುವುದರಿಂದ ಉಂಟಾಗುವ ಆರೋಗ್ಯದ ಅಪಾಯ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಸಮಗ್ರ ರಾಷ್ಟ್ರೀಯ ನೀತಿ ರೂಪಿಸುವಂತೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌‍ಬಿಡಿಬಿ) ಅಧ್ಯಕ್ಷ ಎಸ್‌‍.ಈ. ಸುಧೀಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರನ್ನು ಭೇಟಿಯಾದ ಅವರು, ಬಳಕೆಯಾದ ಅಡುಗೆ ಎಣ್ಣೆಯ ಸುರಕ್ಷಿತ ಸಂಗ್ರಹಣೆ, ವೈಜ್ಞಾನಿಕ ಸಂಸ್ಕರಣೆ ಮತ್ತು ಜೈವಿಕ ಡೀಸೆಲ್‌ ಉತ್ಪಾದನೆಗೆ ಉತ್ತೇಜನ ನೀಡುವ ಕುರಿತು ಜ್ಞಾಪನ ಪತ್ರ ಸಲ್ಲಿಸಿದರು.

ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಎಣ್ಣೆಯನ್ನು ಪದೇಪದೇ ಬಿಸಿಮಾಡುವುದರಿಂದ ಹಾನಿಕಾರಕ ರಾಸಾಯನಿಕ ಸಂಯುಕ್ತಗಳು ಉತ್ಪತ್ತಿಯಾಗುವ ಸಾಧ್ಯತೆಯಿದೆ. ಇಂತಹ ಎಣ್ಣೆಯ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಬಳಕೆಯಾದ ಎಣ್ಣೆಯನ್ನು ಚರಂಡಿ ಹಾಗೂ ಜಲಮೂಲಗಳಿಗೆ ಸುರಿಯುವುದರಿಂದ ಪರಿಸರ ಮಾಲಿನ್ಯವೂ ಹೆಚ್ಚುತ್ತದೆ ಎಂದು ವಿವರಿಸಿದರು.

ಬಳಕೆಯಾದ ಎಣ್ಣೆಯನ್ನು ಸಂಗ್ರಹಿಸಿ ಜೈವಿಕ ಡೀಸೆಲ್‌ ಉತ್ಪಾದನೆಗೆ ಬಳಸುವುದರಿಂದ ತ್ಯಾಜ್ಯ ನಿರ್ವಹಣೆ ಸುಧಾರಿಸುವುದರ ಜೊತೆಗೆ ಉದ್ಯೋಗಾವಕಾಶಗಳ ಸೃಷ್ಟಿಗೂ ನೆರವಾಗಲಿದೆ ಎಂದರು.ಎಣ್ಣೆಯ ಸಂಗ್ರಹಣೆ ಮತ್ತು ವಿಲೇವಾರಿಗೆ ರಾಷ್ಟ್ರೀಯ ಮಾರ್ಗಸೂಚಿ, ಪತ್ತೆಹಚ್ಚುವ ವ್ಯವಸ್ಥೆ ಹಾಗೂ ನಿಯಮಿತ ತಪಾಸಣೆ ಜಾರಿಗೊಳಿಸುವಂತೆ ಮನವಿ ಮಾಡಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ನಿಯಂತ್ರಣ ವ್ಯವಸ್ಥೆ ರೂಪಿಸುವ ಕುರಿತು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌ ಎಲ್‌‍, ಯೋಜನಾ ಸಲಹೆಗಾರ ಡಾ.ದಯಾನಂದ ಜಿ.ಎನ್‌, ಉದ್ದಿಮೆದಾರರಾದ ಸಂಜಯ್‌ ಗಬರ್‌, ಅನಿಲ್‌ ಕುಮಾರ್‌, ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಲೋಕೆಶ್‌ ಗೌಡ ಉಪಸ್ಥಿತರಿದ್ದರು.

RELATED ARTICLES

Latest News