Homeರಾಜ್ಯಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯ ಬಾಗಿಲು ಓಪನ್, ಭಕ್ತರಿಗೆ ದರ್ಶನ ಭಾಗ್ಯ

ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯ ಬಾಗಿಲು ಓಪನ್, ಭಕ್ತರಿಗೆ ದರ್ಶನ ಭಾಗ್ಯ

ಹಾಸನ,ಅ.29- ವರ್ಷಕ್ಕೊಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ನಗರದ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಶಾಸೊ್ತ್ರೕಕ್ತವಾಗಿ ತೆರೆಯಲಾಯಿತು.ಇಂದಿನಿಂದ ನ.11 ರವರೆಗೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.

ನಾಳೆ ಬೆಳಗ್ಗೆ 6 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿದೆ. ಅರಸು ವಂಶಸ್ಥರಾದ ನಂಜರಾಜೆ ಅರಸ್‌‍ ಅವರು ಇಂದು ಮಧ್ಯಾಹ್ನ 12.28 ರ ಸುಮಾರಿಗೆ ದೇವಾಲಯದ ಮುಂಭಾಗ ಬಾಳೆ ಕಂಬ ಕಡಿದ ಬಳಿಕ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ವಿವಿಧ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರು, ಮುಜರಾಯಿ ಸಚಿವರಾದ ಬಸವಂತಪ್ಪ, ಸಂಸದ ಶ್ರೇಯಸ್‌‍ ಪಟೇಲ್‌, ಶಾಸಕ ಸ್ವರೂಪ್‌ ಪ್ರಕಾಶ್‌, ಜಿಲ್ಲಾಧಿಕಾರಿ ಲತಾಕುಮಾರಿ, ಎಸ್‌‍ಪಿ ಶುಭನ್ವಿತ, ಜಿಪಂ ಸಿಇಒ ಶುಭಂಶುಕ್ಲ, ಬಿಸಿಎಫ್‌ ಸೌರಬ್‌ ಕುಮಾರ್‌, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳ ಸಮುಖದಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಯಿತು.

ಬಾಗಿಲು ತೆರೆಯುತ್ತಿದ್ದಂತೆ ಹರ್ಷೋದ್ಘಾರ ಮೊಳಗಿತು. ಜ್ಯೋತಿ ಉರಿಯುತ್ತಿದ್ದ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.ಬೆಳಗ್ಗೆಯಿಂದಲೇ ದೇವಾಲಯದ ಅರ್ಚಕರುಗಳು ಗರ್ಭಗುಡಿಯ ದ್ವಾರದ ಬಳಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ದೇವಿಯ ದರ್ಶನಕ್ಕೆ ಉಚಿತ ಅವಕಾಶವಿದ್ದು, ಸುಗಮ ದರ್ಶನ ಬಯಸುವ ಭಕ್ತರಿಗಾಗಿ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ. 1 ಸಾವಿರ ರೂ. ಹಾಗೂ 300 ರೂ. ಟಿಕೆಟ್‌ ವ್ಯವಸ್ಥೆಯಿದ್ದು, ಲಾಡು ಟಿಕೆಟ್‌, ಇ-ಹುಂಡಿ ಹಾಗೂ ದೇಣಿಗೆ ಕಾಣಿಕೆಯನ್ನು ಆನ್‌ಲೈನ್‌ ಮುಖಾಂತರ https://srihasanaambatemple.com ವೆಬ್‌ಸೈಟ್‌ ಅಥವಾ ವಾಟ್ಸ್ ಆ್ಯಪ್‌ ಸಂಖ್ಯೆ 73539 39611 ಮುಖಾಂತರ ಬುಕ್‌ ಮಾಡಿಕೊಳ್ಳಬಹುದಾಗಿದೆ.

ಗೋಲ್‌್ಡ ಕಾರ್ಡ್‌ ದರ್ಶನದ ಸಮಯ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಇರಲಿದ್ದು, ಪ್ರೋಟೊಕಾಲ್‌ ದರ್ಶನದ ಸಮಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಅವಕಾಶವಿರಲಿದೆ. ನೈವೇದ್ಯದ ಸಮಯ ಹೊರತುಪಡಿಸಿ ದಿನಕ್ಕೆ ಸುಮಾರು 16 ರಿಂದ 18 ಗಂಟೆಗಳ ಕಾಲ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿರಿಯ ನಾಗರಿಕರು, ವಿಶೇಷ ಚೇತನರಿಗಾಗಿ ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ.ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಬೆಂಗಳೂರಿನಿಂದ ಹಾಸನಕ್ಕೆ ಮತ್ತು ಅರಸೀಕೆರೆಯಿಂದ ಹಾಸನಕ್ಕೆ ತಲಾ ಒಂದು ವಿಶೇಷ ರೈಲು ವ್ಯವಸ್ಥೆ ಹಾಗೂ ಸಾರಿಗೆ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಭದ್ರತೆ :
ಭಕ್ತರ ಸುರಕ್ಷತೆ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ದೇವಾಲಯ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ 220 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಎಐ ತಂತ್ರಜ್ಞಾನದ ಮೂಲಕ ಜನಸಂದಣಿ ನಿಯಂತ್ರಿಸಲು ವ್ಯವಸ್ಥೆ ರೂಪಿಸಲಾಗಿದೆ. ಭದ್ರತೆಗಾಗಿ 2000 ಪೊಲೀಸ್‌‍ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು, ಹಲವಾರು ಕಾರ್ಯಕ್ರಮಗಳನ್ನ ಹಮಿಕೊಳ್ಳಲಾಗಿದೆ. ಮೈಸೂರು ದಸರಾ ಮಾದರಿಯಲ್ಲೇ ನಗರದೆಲ್ಲೆಡೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಕುಸ್ತಿ, ವಾಲಿಬಾಲ್‌, ಕಬಡ್ಡಿ, ರಂಗೋಲೆ ಸ್ಪರ್ಧೆ ಸೇರಿದಂತೆ ವಿವಿಧ ಪಂದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಹಳ್ಳಿಕಾರ್‌ ತಳಿ, ಅಮೃತ್‌ಮಹಲ್‌ ತಳಿಯ ಜಾನುವಾರು, ಶ್ವಾನ, ಟಗರು ಪ್ರದರ್ಶನ ಹಮಿಕೊಳ್ಳಲಾಗಿದೆ.ದೇವಾಲಯದ ಗರ್ಭಗುಡಿ ಬಾಗಿಲನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು, ದೇವಾಲಯದ ಆವರಣದಲ್ಲಿ ತೆಂಗಿನಗರಿಗಳಿಂದ ನಿರ್ಮಾಣ ಮಾಡಿರುವ ಕಲಾಕೃತಿ ಭಕ್ತರ ಗಮನ ಸೆಳೆಯುತ್ತಿದೆ.

RELATED ARTICLES

Latest News