ಬೆಂಗಳೂರು,ಅ.29- ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಆಯೋಗದ ಅಮಾನತುಗೊಂಡ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಎಸ್.ಪಿ.ದಯಾನಂದ ಅವರ ನಡುವಿನ ಸುಮಾರು 10 ಕೋಟಿಗೂ ಅಧಿಕ ಹಣಕಾಸಿನ ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ.
ಈ ಕುರಿತು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಗಳು ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿವೆ.
ಸಾಹುಕಾರ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿ ಇ ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡುವ ಸಂದರ್ಭದಲ್ಲಿ ಈ ಹಣಕಾಸಿನ ವ್ಯವಹಾರಗಳ ವಿವರಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಸ್ತುತ ಸಾಹುಕಾರ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇ ಡಿ ಅಧಿಕಾರಿಗಳ ಪ್ರಕಾರ, ರಿಯಲ್ ಎಸ್ಟೇಟ್ ಉದ್ಯಮಿ ಎಸ್.ಪಿ.ದಯಾನಂದ ಅವರ ಕಾರಿನಿಂದ ಕೈಬರಹದ ಲೆಕ್ಕಪತ್ರದ ಹಾಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಖಲೆಗಳಲ್ಲಿ ಸಾಹುಕಾರ್ ಅವರ ಹೆಸರು ಮತ್ತು ದೂರವಾಣಿ ಸಂಪರ್ಕ ಸಂಖ್ಯೆಗಳು ಉಲ್ಲೇಖವಾಗಿವೆ ಎನ್ನಲಾಗಿದೆ.
2025ರ ಆಗಸ್ಟ್ನಿಂದ ಡಿಸೆಂಬರ್ ಅವಧಿಯಲ್ಲಿ ಸಾಹುಕಾರ್ ಅವರಿಂದ ದಯಾನಂದ ಅವರು 5 ಕೋಟಿ ರೂ. ಪಡೆದಿರುವುದಾಗಿ ಲೆಕ್ಕಪತ್ರದಲ್ಲಿ ನಮೂದಿಸಲಾಗಿದೆ ಎಂದು ಇ ಡಿ ನ್ಯಾಯಾಲಯಕ್ಕೆ ತಿಳಿಸಿದೆ. ಇವರಿಬ್ಬರ ನಡುವಿನ ಒಟ್ಟು ಹಣಕಾಸಿನ ವಹಿವಾಟು 10 ಕೋಟಿಗೂ ಅಧಿಕವಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದಲ್ಲದೆ, ಇಬ್ಬರ ನಡುವೆ ಬ್ಯಾಂಕಿಂಗ್ ವ್ಯವಸ್ಥೆಯ ಹೊರತಾಗಿ ಹಣಕಾಸಿನ ವಹಿವಾಟು ನಡೆದಿರುವುದಾಗಿಯೂ ಇ ಡಿ ಆರೋಪಿಸಿದೆ. ಈ ವಹಿವಾಟಿನ ಉದ್ದೇಶ, ಹಣದ ಮೂಲ ಹಾಗೂ ಪ್ರಕರಣದೊಂದಿಗೆ ಅದಕ್ಕಿರುವ ಸಂಬಂಧದ ಕುರಿತು ತನಿಖೆ ಮುಂದುವರಿದಿದೆ.
ಇತರ ಅಕ್ರಮಗಳ ಶಂಕೆ :
ಗದಗದ ಗ್ರಾಮೀಣ ಭಾಗದಲ್ಲಿ ಸಾಹುಕಾರ್ಗೆ ಸಂಬಂಧಿಸಿದ ಟ್ರಸ್ಟ್ ಒಂದರಿಂದ ನಡೆಯುತ್ತಿದ್ದ ಖಾಸಗಿ ಶಾಲೆಯ ನಿರ್ಮಾಣ ಯೋಜನೆಯ 3.36 ಕೋಟಿ ನಿಧಿ ಸಂಗ್ರಹಣೆಯ ಮೂಲಗಳ ಬಗ್ಗೆಯೂ ಇ ಡಿ ತನಿಖೆ ನಡೆಸುತ್ತಿದೆ.ನ್ಯಾಯಾಲಯದಲ್ಲಿ ಶಿವಶಂಕರಪ್ಪ ಸಾಹುಕಾರ್ ಪರ ವಾದ ಮಂಡಿಸಿದ ವಕೀಲ ಸಿ.ಎಚ್.ಹನುಮಂತರಾಯ ಅವರು, ಇ ಡಿ ವಶಪಡಿಸಿಕೊಂಡಿರುವ ಕೈಬರಹದ ಹಾಳೆಗಳಿಗೂ ಜನವರಿ 2026ರ ಕೆಪಿಎಸ್ಸಿ ಪರೀಕ್ಷಾ ಹಗರಣಕ್ಕೂ ಯಾವುದೇ ನೇರ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ತಮ ಕಕ್ಷಿದಾರರು 300 ಎಕರೆಗೂ ಹೆಚ್ಚು ಭೂಮಿ ಹೊಂದಿರುವ ಶ್ರೀಮಂತರಾಗಿದ್ದು, ಯಾವುದೇ ಉದ್ಯೋಗ ಅಕ್ರಮದಲ್ಲಿ ಲಂಚ ಪಡೆಯುವ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.ವಿಶೇಷ ನ್ಯಾಯಾಲಯವು ಇ ಡಿ ತನಿಖಾ ವರದಿಯನ್ನು ಪುನರ್ಪರಿಶೀಲಿಸುತ್ತಿದ್ದು, ಹಣಕಾಸಿನ ವಹಿವಾಟಿನ ಮೂಲಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆಗೆ ಆದೇಶಿಸಿದೆ. ಈ ಹಗರಣದಲ್ಲಿ ಮತ್ತಷ್ಟು ಪ್ರಭಾವಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನ :
ಪಶುವೈದ್ಯಕೀಯ ವೈದ್ಯರ ಹುದ್ದೆಗಳ ನೇಮಕಾತಿಗಾಗಿ ಜನವರಿ 8 ಮತ್ತು 9ರಂದು ನಡೆದಿದ್ದ ಕೆಪಿಎಸ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳು ಸೋರಿಕೆಯಾಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಹುಕಾರ್ ಮತ್ತು ಬಿ.ವಿ.ಗೀತಾ ಅವರನ್ನು ಅಕ್ಟೋಬರ್ 6ರಂದು ಬಂಧಿಸಲಾಗಿತ್ತು.ಈ ನೇಮಕಾತಿ ಅಕ್ರಮಗಳ ತನಿಖೆಯ ಭಾಗವಾಗಿ ಇ ಡಿ ಹಣಕಾಸಿನ ವ್ಯವಹಾರಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ. ಇದೀಗ ಸಾಹುಕಾರ್ ಮತ್ತು ದಯಾನಂದ ನಡುವಿನ ವಹಿವಾಟಿನ ವಿವರಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ, ಈ ಹಣದ ವ್ಯವಹಾರಗಳು ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿವೆಯೇ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ. ಒಟ್ಟಾರೆ, ಕೆಪಿಎಸ್ಸಿ ನೇಮಕಾತಿ ಹಗರಣವು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಜೊತೆಗೆ ಹಣಕಾಸಿನ ವಹಿವಾಟಿನ ಆಯಾಮವನ್ನೂ ಪಡೆದುಕೊಂಡಿದೆ.
