Homeರಾಷ್ಟ್ರೀಯಕ್ರಿಪ್ಟೋ ಕರೆನ್ಸಿಯ ಅತಿದೊಡ್ಡ ದರೋಡೆ..? ಬೈನಾನ್ಸ್ $6.3 ಬಿಲಿಯನ್ ಹ್ಯಾಕ್..?

ಕ್ರಿಪ್ಟೋ ಕರೆನ್ಸಿಯ ಅತಿದೊಡ್ಡ ದರೋಡೆ..? ಬೈನಾನ್ಸ್ $6.3 ಬಿಲಿಯನ್ ಹ್ಯಾಕ್..?

ನವದೆಹಲಿ,ಅ.30- ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ವೇದಿಕೆಯಾದ ಬೈನಾನ್ಸ್ ಗೆ ಭಾರೀ ಸೈಬರ್‌ ಭದ್ರತಾ ಉಲ್ಲಂಘನೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹ್ಯಾಕರ್‌ಗಳು ಕಂಪನಿಯ ವ್ಯವಸ್ಥೆಗೆ ಅನಧಿಕೃತವಾಗಿ ಪ್ರವೇಶಿಸಿ ಸುಮಾರು 6.3 ಬಿಲಿಯನ್‌ ಡಾಲರ್‌ (ಅಂದಾಜು 56 ಸಾವಿರ ಕೋಟಿ ರೂ.) ಮೌಲ್ಯದ ಕ್ರಿಪ್ಟೋ ಸ್ವತ್ತುಗಳಿಗೆ ಅಪಾಯ ಉಂಟುಮಾಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೈನಾನ್ಸ್ ತನ್ನ ವೇದಿಕೆಯಲ್ಲಿ ಠೇವಣಿ ಮತ್ತು ಹಣ ಹಿಂಪಡೆಯುವಿಕೆ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಡೆವಲಪರ್‌ ಲ್ಯಾಪ್ಟಾಪ್‌ನಿಂದ ಹ್ಯಾಕ್‌? :
ಬೈನಾನ್ಸ್ ನ ಪ್ರಾಥಮಿಕ ತನಿಖೆಯ ಪ್ರಕಾರ, ಕಂಪನಿಯ ಡೆವಲಪ್‌್ಸ ಎಂಜಿನಿಯರ್‌ ಒಬ್ಬರ ಲ್ಯಾಪ್ಟಾಪ್‌ ಹ್ಯಾಕರ್‌ಗಳ ನಿಯಂತ್ರಣಕ್ಕೆ ಸಿಲುಕಿರುವ ಸಾಧ್ಯತೆಯಿದೆ. ಇದರ ಮೂಲಕ ಹ್ಯಾಕರ್‌ಗಳು ಕಂಪನಿಯ ಸರ್ವರ್‌ನಲ್ಲಿರುವ ಸೇವಾ ವ್ಯವಸ್ಥೆಗೆ ಪ್ರವೇಶ ಪಡೆದು ಅನಧಿಕೃತ ಹಣ ವರ್ಗಾವಣೆ ವಹಿವಾಟುಗಳನ್ನು ನಡೆಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಬಳಕೆದಾರರ ಕ್ರಿಪ್ಟೋ ವ್ಯಾಲೆಟ್‌ಗಳ ಖಾಸಗಿ ಕೀಗಳು ಸೋರಿಕೆಯಾಗಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

3 ಬಿಲಿಯನ್‌ ಡಾಲರ್‌ ಮೌಲ್ಯದ ಆಸ್ತಿ ಫ್ರೀಜ್‌ :
ಘಟನೆಯ ಬೆನ್ನಲ್ಲೇ ಬ್ಲಾಕ್‌ಚೈನ್‌ ಪಾಲುದಾರರ ಸಹಕಾರದೊಂದಿಗೆ ಸುಮಾರು 3 ಬಿಲಿಯನ್‌ ಡಾಲರ್‌ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಬೈನಾನ್ಸ್ ತಿಳಿಸಿದೆ. ಉಳಿದ ಆಸ್ತಿಗಳ ಪತ್ತೆ ಮತ್ತು ಮರುಪಡೆಯುವ ಕಾರ್ಯ ಮುಂದುವರಿದಿದೆ. ಬಳಕೆದಾರರಿಗೆ ಯಾವುದೇ ನಷ್ಟವಾಗದಂತೆ ಕಂಪನಿಯ SAFU ತುರ್ತು ನಿಧಿ ಹಾಗೂ ಸ್ವಂತ ಹಣದಿಂದ ಸಂಪೂರ್ಣ ನಷ್ಟವನ್ನು ಭರಿಸುವುದಾಗಿಯೂ ಭರವಸೆ ನೀಡಿದೆ.

ಟೆಥರ್‌, ಸರ್ಕಲ್‌ನಿಂದಲೂ ಕ್ರಮ :
ಬೈನಾನ್‌್ಸ ಮೇಲಿನ ದಾಳಿಯ ಬೆನ್ನಲ್ಲೇ ಪ್ರಮುಖ ಕ್ರಿಪ್ಟೋಕರೆನ್ಸಿ ಸಂಸ್ಥೆಗಳಾದ ಟೆಥರ್‌ ಮತ್ತು ಸರ್ಕಲ್‌ ಕೂಡ ಕ್ರಮ ಕೈಗೊಂಡಿವೆ. ಟೆಥರ್‌ ಸುಮಾರು 1.55ರಿಂದ 1.6 ಬಿಲಿಯನ್‌ ಡಾಲರ್‌ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳನ್ನು ಸ್ಥಗಿತಗೊಳಿಸಿದ್ದರೆ, ಸರ್ಕಲ್‌ 800 ಮಿಲಿಯನ್‌ ಡಾಲರ್‌ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಫ್ರೀಜ್‌ ಮಾಡಿದೆ ಎಂದು ವರದಿಯಾಗಿದೆ.

ಕ್ರಿಪ್ಟೋ ಮಾರುಕಟ್ಟೆಯಲ್ಲಿ ತಲ್ಲಣ :
ಸೈಬರ್‌ ದಾಳಿಯ ಸುದ್ದಿ ಹೊರಬೀಳುತ್ತಿದ್ದಂತೆ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಆತಂಕ ಉಂಟಾಗಿದೆ. ಬಿಟ್‌ ಕಾಯಿನ್‌ ಮೌಲ್ಯ ಶೇ.3.2ರಿಂದ ಶೇ.5ರವರೆಗೆ ಕುಸಿದು ಒಂದು ಹಂತದಲ್ಲಿ 77 ಸಾವಿರ ಡಾಲರ್‌ಗಿಂತ ಕೆಳಕ್ಕೆ ಇಳಿದಿದೆ. ಎಥೆರಿಯಂ ಮತ್ತು ಸೋಲಾನಾ ಸೇರಿದಂತೆ ಇತರ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲೂ ಇಳಿಕೆ ಕಂಡುಬಂದಿದೆ.

ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಹಣದ ಚಲನವಲನ ಪತ್ತೆಹಚ್ಚಲು ಕಾನೂನು ಜಾರಿ ಸಂಸ್ಥೆಗಳು ಹಾಗೂ ಬ್ಲಾಕ್‌ಚೈನ್‌ ಗುಪ್ತಚರ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ದಾಳಿಯ ತಾಂತ್ರಿಕ ವಿವರಗಳನ್ನು ಬಹಿರಂಗಪಡಿಸುವುದಾಗಿ ಬೈನಾನ್ಸ್ ತಿಳಿಸಿದೆ. ಒಟ್ಟಿನಲ್ಲಿ, ಒಬ್ಬ ಉದ್ಯೋಗಿಯ ಲ್ಯಾಪ್ಟಾಪ್‌ನಲ್ಲಿನ ಭದ್ರತಾ ಲೋಪವೇ ಜಾಗತಿಕ ಕ್ರಿಪ್ಟೋ ವಹಿವಾಟು ವ್ಯವಸ್ಥೆಗೆ ಭಾರೀ ಅಪಾಯ ತಂದೊಡ್ಡಿರುವ ಸಾಧ್ಯತೆ ಈ ಘಟನೆ ಮೂಲಕ ಮತ್ತೆ ಸಾಬೀತಾಗಿದೆ.

RELATED ARTICLES

Latest News