ವಾಷಿಂಗ್ಟನ್, ನ.1- ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಎದುರಾಗಿದೆ. ಇರಾನ್ ಮೇಲೆ ಮತ್ತೊಂದು ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದು, ಇರಾನ್ನ ಇನ್ನೊಂದು ಅಥವಾ ಎರಡು ಪ್ರಮುಖ ಗುರಿಗಳ ಮೇಲೆ ಕೇವಲ 10 ನಿಮಿಷಗಳಲ್ಲಿ ದಾಳಿ ನಡೆಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಹೇಳಿದ್ದಾರೆ.ಈ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.
ಫ್ಲೋರಿಡಾದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ನ ಪರಮಾಣು ಸ್ಥಾವರಗಳನ್ನು ಈಗಾಗಲೇ ನಾಶಪಡಿಸಲಾಗಿದೆ. ಆದರೆ ಇನ್ನೂ ಕೆಲವು ಸ್ಥಳಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪಿಕಾಕ್ಸ್ ಮೌಂಟನ್ ಪ್ರದೇಶವನ್ನು ಉಲ್ಲೇಖಿಸಿದ ಅವರು, ಅಗತ್ಯಬಿದ್ದರೆ ಆ ಸ್ಥಳದ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ಇಂತಹ ಕಾರ್ಯಾಚರಣೆಯನ್ನು ಅತಿ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.
ನವೆಂಬರ್ 3ರಂದು ಅಮೆರಿಕದಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಬಳಿಕ ಇರಾನ್ ವಿರುದ್ಧ ಹೊಸ ಮಿಲಿಟರಿ ಕಾರ್ಯಾಚರಣೆ ಆರಂಭವಾಗಬಹುದೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ದಿನಗಳಿಂದ ಟ್ರಂಪ್ ನೀಡುತ್ತಿರುವ ಹೇಳಿಕೆಗಳು ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ.
ಇರಾನ್ ವಿರುದ್ಧ ಮತ್ತೊಂದು ಸಣ್ಣ ಪ್ರಮಾಣದ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬಹುದು ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಇದೇ ವೇಳೆ, ಇರಾನ್ ವಿರುದ್ಧ ಸಂಭವನೀಯ ಮಿಲಿಟರಿ ಕ್ರಮಕ್ಕೆ ಸಿದ್ಧರಾಗಿರುವಂತೆ ವಾಷಿಂಗ್ಟನ್ ಕೆಲವು ಗಲ್ಫ್ ಅರಬ್ ರಾಷ್ಟ್ರಗಳಿಗೆ ಸೂಚಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ ಅಂತಿಮ ನಿರ್ಧಾರವನ್ನು ಟ್ರಂಪ್ ಇನ್ನೂ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.
ಮೊಜ್ತಬಾ ಖಮೇನಿ ಎಚ್ಚರಿಕೆ; ಗುರಿ ಪಟ್ಟಿಗೆ ಹೊಸ ಸೇರ್ಪಡೆ
ಇನ್ನೊಂದೆಡೆ, ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅಮೆರಿಕ ಮತ್ತು ಇಸ್ರೇಲ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಅಧಿಕಾರ ವಹಿಸಿಕೊಂಡಿರುವ ಅವರು, ಯಾವುದೇ ರೀತಿಯ ಬೆದರಿಕೆಗೆ ತಕ್ಷಣ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡುವಂತೆ ಇರಾನ್ನ ಹಿರಿಯ ಸೇನಾ ಕಮಾಂಡರ್ಗಳಿಗೆ ಸೂಚಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ಗೆ ಸೇರಿದ ಎಲ್ಲ ರೀತಿಯ ಸ್ಪಷ್ಟ ಹಾಗೂ ಅಮೂರ್ತ ಆಸ್ತಿಗಳನ್ನು ಇರಾನ್ನ ಗುರಿ ಪಟ್ಟಿಗೆ ಸೇರಿಸುವಂತೆ ಅವರು ಆದೇಶಿಸಿದ್ದಾರೆ ಎನ್ನಲಾಗಿದೆ. ಇರಾನ್ನ ಮಿಲಿಟರಿ ಕಮಾಂಡರ್ಗಳೊಂದಿಗಿನ ಅವರ ಮೊದಲ ವರದಿಯಾದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಮಾರ್ಕೊ ರೂಬಿಯೊ ಹೇಳಿದ್ದೇನು?
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕೂಡ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಬಯಸಿದರೆ ತನ್ನ ಮಿಲಿಟರಿ ಗುರಿಗಳನ್ನು ಸಾಧಿಸಬಹುದು ಎಂದು ಹೇಳಿರುವ ಅವರು, ಇರಾನ್ ವಿರುದ್ಧ ಹೊಸ ದಾಳಿ ನಡೆಸುವ ಬಗ್ಗೆ ಅಧ್ಯಕ್ಷ ಟ್ರಂಪ್ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ವಾಣಿಜ್ಯ ಹಡಗುಗಳನ್ನು ದಾಳಿಗೆ ಗುರಿಯಾಗಿಸಿಕೊಂಡಿರುವ ಇರಾನ್ನ ಕ್ರಮವನ್ನು ಅಮೆರಿಕ ಟೀಕಿಸಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಹಿರಿಯ ಸೇನಾ ಅಧಿಕಾರಿಗಳು ಮೃತಪಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನೂ ಮುಚ್ಚಿದ್ದರಿಂದ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಉಂಟಾಗಿತ್ತು.
ಜೂನ್ 17ರಂದು ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಜುಲೈ 8ರಂದು ಟ್ರಂಪ್ ಒಪ್ಪಂದ ಮುಗಿದಿದೆ ಎಂದು ಘೋಷಿಸಿದ ಬಳಿಕ ಪರಿಸ್ಥಿತಿ ಮತ್ತೆ ಬಿಗಡಾಯಿಸಿತ್ತು. ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ನಡೆಸಿದರೆ ಸಂಘರ್ಷವು ಕೇವಲ ಎರಡು ರಾಷ್ಟ್ರಗಳಿಗೆ ಸೀಮಿತವಾಗದೆ ಇಡೀ ಮಧ್ಯಪ್ರಾಚ್ಯಕ್ಕೆ ವಿಸ್ತರಿಸುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಜಾಗತಿಕ ತೈಲ ಪೂರೈಕೆ, ಇಂಧನ ಬೆಲೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು.
ಒಂದೆಡೆ ಟ್ರಂಪ್ ಆಡಳಿತ ಮಿಲಿಟರಿ ಆಯ್ಕೆಯನ್ನು ಮುಕ್ತವಾಗಿಟ್ಟುಕೊಂಡಿದ್ದರೆ, ಮತ್ತೊಂದೆಡೆ ಇರಾನ್ ಯಾವುದೇ ದಾಳಿಗೆ ತಕ್ಷಣ ಪ್ರತಿಕ್ರಿಯಿಸುವ ಎಚ್ಚರಿಕೆ ನೀಡಿದೆ. ಹೀಗಾಗಿ ಅಮೆರಿಕದ ಮಧ್ಯಂತರ ಚುನಾವಣೆ ಬಳಿಕ ವಾಷಿಂಗ್ಟನ್ ಕೈಗೊಳ್ಳುವ ನಿರ್ಧಾರ ಮಧ್ಯಪ್ರಾಚ್ಯದ ಮುಂದಿನ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಳವಣಿಗೆಗಳಿಗೆ ನಿರ್ಣಾಯಕವಾಗಲಿದೆ.
