ಬೆಂಗಳೂರು,ನ.5- ರಾಜ್ಯಸರ್ಕಾರ ಹಾಲು, ಮೊಸರು ಮತ್ತು ಬಸ್ ಪ್ರಯಾಣದರ ಏರಿಕೆ ಮಾಡಿರುವುದು ಸರಿಯಲ್ಲ, ಇದರಿಂದ ಶ್ರೀಸಾಮಾನ್ಯರಿಗೆ ದುಬಾರಿ ಹೊರೆಯಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಬೆಲೆ ಏರಿಕೆ ಧೋರಣೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ವಿಧವಾ ವೇತನ, ವೃದ್ಧಾಪ್ಯ ವೇತನ ಸಕಾಲಕ್ಕೆ ನೀಡುತ್ತಿಲ್ಲ. ಬರಗಾಲ ಘೋಷಣೆ ಮಾಡಿದ್ದು, ಬರ ಪರಿಹಾರ ಧನ ಬಿಡುಗಡೆ ಮಾಡಿಲ್ಲ. ಪಂಚಾಯಿತಿಗಳಲ್ಲಿ ಹಣವಿಲ್ಲದೆ ಕೊಳವೆ ಬಾವಿಗಳ ರಿಪೇರಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ರೀತಿ ನಿಮ ಆಡಳಿತಾವಧಿಯಲ್ಲಿ ರಾಜ್ಯ ಸುಭೀಕ್ಷವಾಗಿದೆಯೇ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುತ್ತಿಲ್ಲ. ಈಗಲೇ ಬರಗಾಲದಿಂದ ಹತ್ತಾರು ಸಮಸ್ಯೆಗಳು ಎದುರಿಸುತ್ತಿದ್ದು, ಮುಂದಿನ ಬೇಸಿಗೆಯನ್ನು ಹೇಗೆ ನಿಭಾಯಿಸುತ್ತೀರಿ?, ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಿಲ್ಲ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ಸರಿಯಾಗಿ ಆಡಳಿತ ನಡೆಸಿ ಎಲ್ಲಾ ಹಂತಗಳಲ್ಲೂ ವಿಫಲವಾಗುತ್ತಿರುವ ರಾಜ್ಯಸರ್ಕಾರಕ್ಕೆ ಜನರು ಹಿಡಿಶಾಪವಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿರುವ ಆರೋಪವಿದ್ದು, ಅದರ ಹಿಂದೆ ಕಾಂಗ್ರೆಸ್ನವರೇ ಇದ್ದಾರೆ ಎಂದು ಹೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕೆ? ಅಧಿಕಾರಿಗಳು, ಶಾಸಕರ ತೇಜೋವಧೆ ಮಾಡುವಂತಹ ಇದನ್ನು ನಿಗ್ರಹಿಸದಿದ್ದರೆ ಒಳ್ಳೆಯ ಹೆಸರು ಬರುವುದಿಲ್ಲ. ಸ್ಟಿಂಗ್ ಆಪರೇಷನ್ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಗೃಹಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ನೀಡಿರುವ ಹೇಳಿಕೆ ಸರಿಯಲ್ಲ. ಗೃಹಸಚಿವರು ಎಲ್ಲಿಂದ ಬಂದಿದ್ದಾರೆ. ಹಳ್ಳಿಯಿಂದ ದೆಹಲಿಗೆ ಹೋದವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಕುಮಾರಸ್ವಾಮಿ ಮತ್ತು ಗೌಡರು ಹಳ್ಳಿಯನ್ನು ಮರೆತಿಲ್ಲ. ನೀವು ಹಳ್ಳಿಯನ್ನು ಮರೆತಿರಬಹುದು ಎಂದು ತಿರುಗೇಟು ನೀಡಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆ ಹಿಂಪಡೆಯಲು ಆಗ್ರಹ :
ವಿಧಾನಪರಿಷತ್ನ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಮಾತನಾಡಿ, ಜನರಿಗೆ ಗ್ಯಾರಂಟಿ ಯೋಜನೆ ಕೊಡುವುದಾಗಿ ಭರವಸೆ ನೀಡಿದ ಸರ್ಕಾರ, ಹಾಲು, ಮೊಸರು, ಬಸ್ ಪ್ರಯಾಣದರ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಕೂಡಲೇ ಈ ದರಗಳನ್ನು ಇಳಿಸಬೇಕು ಎಂದು ಗ್ರಹಿಸಿದರು.
ಇದೇ ರೀತಿ ಬೆಲೆ ಏರಿಕೆ ಮಾಡಿ ಜನರಿಗೆ ಹೊರೆ ಹೊರಿಸುತ್ತಿದ್ದರೆ ಸರ್ಕಾರದ ವಿರುದ್ಧ ತಿರುಗಿಬಿದ್ದು, ನಿಮಗೆ ಪಾಠ ಕಲಿಸುವ ದಿನಗಳು ದೂರ ಇಲ್ಲ ಎಂದು ಅವರು ಟೀಕಿಸಿದರು. 2 ಬಾರಿ ಮುಖ್ಯಮಂತ್ರಿಯಾಗಿ ಈಗ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರ ಬಗ್ಗೆ ಪ್ರಿಯಾಂಕ್ ಖರ್ಗೆಯವರು ಹಗುರವಾಗಿ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆಯವರಿಗೆ ಅಧಿಕಾರ ಶಾಶ್ವತವೇ? ಕುಮಾರಸ್ವಾಮಿಯವರನ್ನು ಟೀಕಿಸುವ ಭರದಲ್ಲಿ ಹಳ್ಳಿಯ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ವೈಯಕ್ತಿಕ ನಿಂದನೆ ಬಿಟ್ಟು ವಿಷಯಾಧಾರಿತ ಟೀಕೆ ಮಾಡಬೇಕು, ಅಧಿಕಾರದ ಮದದಿಂದ ಮಾತನಾಡಬಾರದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದವರು. ಅದನ್ನು ನಿಮ ನಾಯಕರಾದ ರಾಹುಲ್ಗಾಂಧಿ ನಕಲು ಮಾಡಿದರು. ನಿಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ಕುಮಾರಸ್ವಾಮಿಯವರ ಬಗ್ಗೆ ನೀಡಿರುವ ಹೇಳಿಕೆಯನ್ನು ವಾಪಸ್ಸು ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
