Homeರಾಷ್ಟ್ರೀಯಟ್ರಂಪ್ ಸೋಲಿನ ಬೆನ್ನಲ್ಲೇ ಚೇತರಿಸಿಕೊಂಡ ಭಾರತದ ಷೇರು ಮಾರುಕಟ್ಟೆ

ಟ್ರಂಪ್ ಸೋಲಿನ ಬೆನ್ನಲ್ಲೇ ಚೇತರಿಸಿಕೊಂಡ ಭಾರತದ ಷೇರು ಮಾರುಕಟ್ಟೆ

ಮುಂಬೈ,ನ.5- ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್‌ಗಳು ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಉಂಟಾದ ಸಕಾರಾತಕ ವಾತಾವರಣ ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಕಚ್ಚಾ ತೈಲ ಬೆಲೆಯಲ್ಲಿ ಶೇ.8ಕ್ಕೂ ಅಧಿಕ ಕುಸಿತ, ವಿದೇಶಿ ಹೂಡಿಕೆದಾರರ ಖರೀದಿ ಮತ್ತು ಅಮೆರಿಕದ ಷೇರು ಮಾರುಕಟ್ಟೆಯ ಬಲವಾದ ಏರಿಕೆಯ ಪರಿಣಾಮ ದಲಾಲ್‌ ಸ್ಟ್ರೀಟ್‌ನಲ್ಲಿಂದು ಭರ್ಜರಿ ರ್ಯಾಲಿ ಕಂಡುಬಂದಿದೆ.

ಇಂದಿನ ಆರಂಭಿಕ ವಹಿವಾಟಿನಲ್ಲೇ ಹೂಡಿಕೆದಾರರ ಸಂಪತ್ತು ಸುಮಾರು 7 ಲಕ್ಷ ಕೋಟಿ ಹೆಚ್ಚಾಗಿದೆ. ಸೆನ್ಸೆಕ್‌್ಸ 1,300ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ 78,630ರ ಮಟ್ಟದಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 50 ಕೂಡ 24,350ರ ಗಡಿ ದಾಟಿತು. ಬೆಳಿಗ್ಗೆ 10.15ರ ವೇಳೆಗೆ ಸೆನ್ಸೆಕ್‌್ಸ ಸುಮಾರು 1,400 ಅಂಕಗಳ ಏರಿಕೆಯೊಂದಿಗೆ 78,735.79ಕ್ಕೆ ತಲುಪಿತ್ತು. ನಿಫ್ಟಿ 50 431 ಅಂಕಗಳ ಏರಿಕೆಯೊಂದಿಗೆ 24,389.55ರ ಮಟ್ಟಕ್ಕೆ ಏರಿಕೆಯಾಗಿತ್ತು.

ಇದರೊಂದಿಗೆ ಸೆಪ್ಟೆಂಬರ್‌ 4ರ ಬಳಿಕ ಇದೇ ಮೊದಲ ಬಾರಿಗೆ ನಿಫ್ಟಿ 50 ಸೂಚ್ಯಂಕ 24,000ರ ಗಡಿ ದಾಟಿದೆ. ಸತತ ಆರನೇ ವಹಿವಾಟು ಅವಧಿಯಲ್ಲೂ ಭಾರತೀಯ ಮಾರುಕಟ್ಟೆ ಏರಿಕೆ ದಾಖಲಿಸಿದೆ.

7 ಲಕ್ಷ ಕೋಟಿ ಏರಿಕೆ ಹೇಗೆ?
ಇಂದಿನ ವಹಿವಾಟು ಆರಂಭವಾದಾಗ ಬಿಎಸ್‌‍ಇಯಲ್ಲಿ ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಸುಮಾರು ?4,93,44,359 ಕೋಟಿ ಇತ್ತು. ಬೆಳಿಗ್ಗೆ 10.45ರ ವೇಳೆಗೆ ಅದು ?5,01,00,485 ಕೋಟಿಗೆ ಏರಿಕೆಯಾಗಿದೆ. ಅಂದರೆ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ?7 ಲಕ್ಷ ಕೋಟಿಗೂ ಅಧಿಕ ಹೆಚ್ಚಳವಾಗಿದೆ.

ತೈಲ ಬೆಲೆ ಕುಸಿತ ಪ್ರಮುಖ ಕಾರಣ
ಭಾರತೀಯ ಷೇರು ಮಾರುಕಟ್ಟೆಯ ಏರಿಕೆಗೆ ಪ್ರಮುಖ ಕಾರಣ ಕಚ್ಚಾ ತೈಲ ಬೆಲೆಯಲ್ಲಿ ಕಂಡುಬಂದ ಭಾರೀ ಕುಸಿತ. ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶದ ಬಳಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿ ಮೂಡಿದೆ.

ಬ್ರೆಂಟ್‌ ಕಚ್ಚಾ ತೈಲದ ಬೆಲೆ ಹಿಂದಿನ ವಹಿವಾಟಿನಲ್ಲಿ ಸುಮಾರು ಶೇ.8.7ರಷ್ಟು ಕುಸಿದು ಬ್ಯಾರೆಲ್‌ಗೆ 94 ಡಾಲರ್‌ ಸಮೀಪಕ್ಕೆ ಬಂದಿದ್ದರೆ, ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲವೂ ಸುಮಾರು 88 ಡಾಲರ್‌ಗೆ ಇಳಿದಿದೆ.

ಭಾರತವು ತನ್ನ ಕಚ್ಚಾ ತೈಲದ ಅಗತ್ಯದ ಬಹುಪಾಲನ್ನು ಆಮದು ಮಾಡಿಕೊಳ್ಳುವುದರಿಂದ ತೈಲ ಬೆಲೆ ಇಳಿಕೆ ದೇಶದ ಆಮದು ವೆಚ್ಚ, ಚಾಲ್ತಿ ಖಾತೆ ಮತ್ತು ಹಣದುಬ್ಬರದ ಮೇಲಿನ ಒತ್ತಡವನ್ನು ತಗ್ಗಿಸುವ ಸಾಧ್ಯತೆ ಇದೆ. ಇದರಿಂದ ಕಂಪನಿಗಳ ಲಾಭದಾಯಕತೆಗೂ ಅನುಕೂಲವಾಗಬಹುದು.

ವಿದೇಶಿ ಹೂಡಿಕೆದಾರರ ಖರೀದಿ ಹೆಚ್ಚಳ
ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಷೇರುಗಳಿಂದ ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದಿದ್ದ ವಿದೇಶಿ ಹೂಡಿಕೆದಾರರು ಇದೀಗ ಮತ್ತೆ ಖರೀದಿಯತ್ತ ಮುಖ ಮಾಡಿರುವುದು ಮಾರುಕಟ್ಟೆಗೆ ಮತ್ತೊಂದು ಬಲ ನೀಡಿದೆ.ಬುಧವಾರ ವಿದೇಶಿ ಹೂಡಿಕೆದಾರರು ಸುಮಾರು 7,284 ಕೋಟಿ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ಇದು ಅಕ್ಟೋಬರ್‌ 28, 2025ರ ಬಳಿಕ ಒಂದೇ ದಿನದಲ್ಲಿ ದಾಖಲಾದ ಅತಿ ದೊಡ್ಡ ಖರೀದಿ ಎಂದು ವರದಿಯಾಗಿದೆ. ನವೆಂಬರ್‌ನಲ್ಲಿ ಇದುವರೆಗೆ ಎಫ್‌ಐಐಗಳು 17,000 ಕೋಟಿಗೂ ಹೆಚ್ಚು ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿರುವುದಾಗಿ ತಿಳಿದುಬಂದಿದೆ.

ವಾಲ್‌ ಸ್ಟ್ರೀಟ್‌ನಲ್ಲೂ ಭರ್ಜರಿ ಏರಿಕೆ
ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ಬಲವಾದ ಏರಿಕೆಯೂ ಭಾರತೀಯ ಮಾರುಕಟ್ಟೆಗೆ ಪೂರಕವಾಯಿತು. ಬುಧವಾರ ಎಸ್‌‍ಪಿ 500 ಸುಮಾರು ಶೇ.1.6, ಡೌ ಜೋನ್‌್ಸ ಶೇ.3 ಹಾಗೂ ನಾಸ್ಡಾಕ್‌ ಶೇ.1.4ರಷ್ಟು ಏರಿಕೆ ಕಂಡವು.ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್‌ಗಳ ಪ್ರಬಲ ಪ್ರದರ್ಶನದ ಬಳಿಕ ರಾಜಕೀಯ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಮೂಡಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಗಳಲ್ಲೂ ಅಪಾಯ ಸ್ವೀಕಾರದ ಮನೋಭಾವ ಹೆಚ್ಚಾಗಿದೆ.

ಭಾರತಕ್ಕೆ ಏನು ಲಾಭ?
ಕಚ್ಚಾ ತೈಲದ ಬೆಲೆ ಇಳಿಕೆ ಮುಂದುವರಿದರೆ ಭಾರತದ ಆಮದು ಬಿಲ್‌ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ರೂಪಾಯಿ ಮೇಲಿನ ಒತ್ತಡ ಮತ್ತು ಹಣದುಬ್ಬರದ ಅಪಾಯ ತಗ್ಗಬಹುದು. ಜೊತೆಗೆ ತೈಲ ಆಧಾರಿತ ಕೈಗಾರಿಕೆಗಳು ಹಾಗೂ ಹೆಚ್ಚಿನ ಇಂಧನ ವೆಚ್ಚ ಎದುರಿಸುವ ಕಂಪನಿಗಳ ಲಾಭದ ಮೇಲೂ ಸಕಾರಾತಕ ಪರಿಣಾಮ ಬೀರುವ ಸಾಧ್ಯತೆ ಇದೆ.ಆದರೆ ಅಮೆರಿಕದ ಚುನಾವಣಾ ಫಲಿತಾಂಶದ ಸಂಪೂರ್ಣ ಆರ್ಥಿಕ ಪರಿಣಾಮ ತಕ್ಷಣವೇ ಗೋಚರಿಸುವುದಿಲ್ಲ. ಅಮೆರಿಕದ ಹಣಕಾಸು ನೀತಿ, ಬಾಂಡ್‌ ಇಳುವರಿ, ಡಾಲರ್‌ನ ಚಲನೆ, ಹಣದುಬ್ಬರ ಹಾಗೂ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಗಳ ದಿಕ್ಕನ್ನು ನಿರ್ಧರಿಸಲಿವೆ.

ಹೀಗಾಗಿ ಗುರುವಾರದ ಏರಿಕೆ ಹೂಡಿಕೆದಾರರಿಗೆ ದೀಪಾವಳಿ ಉಡುಗೊರೆಯಂತಿದ್ದರೂ, ಈ ಏರಿಕೆ ಮುಂದುವರಿಯಲು ಕಚ್ಚಾ ತೈಲದ ಬೆಲೆ, ವಿದೇಶಿ ಹೂಡಿಕೆ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗಳ ಮೇಲೆ ಮಾರುಕಟ್ಟೆ ಕಣ್ಣಿಟ್ಟಿರಲಿದೆ.

RELATED ARTICLES

Latest News