ನ್ಯೂಯಾರ್ಕ್, ನ.5-ಅಮೆರಿಕದಲ್ಲಿ ವೃದ್ಧರನ್ನು ಗುರಿಯಾಗಿಸಿಕೊಂಡು ನಡೆದ ವಂಚನೆ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಭಾರತೀಯ ಪ್ರಜೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಸಂತ್ರಸ್ತರಿಗೆ 24 ಲಕ್ಷ ಡಾಲರ್ (ಸುಮಾರು 20 ಕೋಟಿ) ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಭಾರತೀಯ ಪ್ರಜೆಯಾಗಿರುವ ಹಾಗೂ ಈ ಹಿಂದೆ ಇಲಿನಾಯ್ಸ್ ನಲ್ಲಿ ವಾಸವಾಗಿದ್ದ ಅಹದ್ ಮಕ್ಬುಲ್ ಸಯ್ಯದ್(60)ಗೆ ಕಳೆದ ವಾರ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಸಿ. ಹಿಂಡರ್‌ಕರ್ ಅವರು 96 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಮಾಡುವ ಸಂಚಿನಲ್ಲಿ ಭಾಗಿಯಾಗಿರುವುದಾಗಿ ಸಯ್ಯದ್ ಈ ಹಿಂದೆಯೇ ತಪ್ಪೊಪ್ಪಿಕೊಂಡಿದ್ದ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.ಅಮೆರಿಕದ ವಿವಿಧೆಡೆ, ಅದರಲ್ಲೂ ಅರಿಜೋನಾ ಸೇರಿದಂತೆ ಹಲವು ರಾಜ್ಯಗಳಲ್ಲಿ ವೃದ್ಧರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಬೃಹತ್ ತಾಂತ್ರಿಕ ಬೆಂಬಲ (ಟೆಕ್ ಸಪೋರ್ಟ್) ಮತ್ತು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ನಡೆಸಿದ ವಂಚನೆ ಪ್ರಕರಣದಲ್ಲಿ ಸಯ್ಯದ್ ಭಾಗಿಯಾಗಿದ್ದ.
ವಂಚಕರು ಮೊದಲು ಕಂಪ್ಯೂಟರ್‌ನಲ್ಲಿ ನಕಲಿ ಪಾಪ್‌ಅಪ್ ಸಂದೇಶಗಳನ್ನು ತೋರಿಸಿ, ಕಂಪ್ಯೂಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಅಥವಾ ಕಂಪ್ಯೂಟರ್ ಸ್ಥಗಿತಗೊಂಡಿದೆ ಎಂದು ನಂಬಿಸುತ್ತಿದ್ದರು. ಸಮಸ್ಯೆ ಪರಿಹಾರಕ್ಕಾಗಿ ಸಂದೇಶದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ವಂಚಕರು ತಾವು ತಾಂತ್ರಿಕ ಸಹಾಯ ಸಿಬ್ಬಂದಿ ಅಥವಾ ಸರ್ಕಾರಿ ಅಧಿಕಾರಿಗಳೆಂದು ಪರಿಚಯಿಸಿಕೊಳ್ಳುತ್ತಿದ್ದರು.
ಸಂತ್ರಸ್ತರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಹಾಗೂ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಸುಳ್ಳು ಹೇಳಿ ಭಯ ಹುಟ್ಟಿಸುತ್ತಿದ್ದರು. ಕೆಲವರಿಗೆ ಅವರ ಖಾತೆಗಳು ಮಕ್ಕಳ ಅಶ್ಲೀಲ ಚಿತ್ರಗಳು ಸೇರಿದಂತೆ ಇತರ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿವೆ ಎಂದು ಸುಳ್ಳು ಆರೋಪ ಮಾಡುತ್ತಿದ್ದರು.
ನಂತರ ತಮ ಹಣ ಮತ್ತು ಆಸ್ತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಹಣವನ್ನು ಹಿಂಪಡೆಯಬೇಕು ಅಥವಾ ವರ್ಗಾಯಿಸಬೇಕು ಎಂದು ಸೂಚಿಸುತ್ತಿದ್ದರು. ಕೆಲವರಿಗೆ ಚಿನ್ನ ಖರೀದಿಸಿ, ನಕಲಿ ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಬರುವ ವ್ಯಕ್ತಿಗಳಿಗೆ ನೀಡುವಂತೆ ಸೂಚಿಸಲಾಗುತ್ತಿತ್ತು. ಇನ್ನು ಕೆಲವರಿಂದ ನಗದು ಹಣ ಪಡೆಯಲಾಗುತ್ತಿತ್ತು.
ಇದಲ್ಲದೆ, ಗಿಫ್‌್ಟ ಕಾರ್ಡ್‌ಗಳನ್ನು ಖರೀದಿಸಿ ಅದರ ಸಂಖ್ಯೆಗಳನ್ನು ವಂಚಕರಿಗೆ ನೀಡುವಂತೆ ಸಂತ್ರಸ್ತರಿಗೆ ಸೂಚಿಸಲಾಗುತ್ತಿತ್ತು. ಕನಿಷ್ಠ ಒಬ್ಬ ಸಂತ್ರಸ್ತನಿಗೆ ಬಿಟ್‌ಕಾಯಿನ್ ಎಟಿಎಂ ಮೂಲಕ ನಗದು ಹಣ ಜಮೆ ಮಾಡುವಂತೆಯೂ ನಿರ್ದೇಶಿಸಲಾಗಿತ್ತು.ಈ ವಂಚನೆಯಿಂದ ಕೆಲವರು ತಮ ಜೀವನಪೂರ್ತಿ ಉಳಿಸಿದ್ದ ಬಹುತೇಕ ಹಣವನ್ನು ಕಳೆದುಕೊಂಡಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
