ಬೆಂಗಳೂರು, ನ,6- ಕೋಣನಕುಂಟೆ ಕ್ರಾಸ್‌ನ ಫೋರಂ ಮಾಲ್‌ನಲ್ಲಿರುವ ಪಿವಿಆರ್ ಐನಾಕ್ಸ್ ಚಿತ್ರಮಂದಿರದಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಜ್ಯೂಸ್ ಮಾರಾಟ ಕೌಂಟರ್ ಅನ್ನು ಮುಚ್ಚಿಸಲಾಗಿದೆ.
ಈ ಸಂಬಂಧ ಸಂಸ್ಥೆಗೆ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಗ್ರಾಹಕರಿಗೆ ಜ್ಯೂಸ್ ವಿತರಿಸಲು ಬಳಸುತ್ತಿದ್ದ ಕಪ್‌ಗಳ ಕುರಿತು ಬಂದ ದೂರಿನ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಿಯಮಗಳ ಉಲ್ಲಂಘನೆ ಬೆಳಕಿಗೆ ಬಂದಿದೆ. ಹೀಗಾಗಿ ತಕ್ಷಣ ಕ್ರಮ ಕೈಗೊಂಡ ಅಧಿಕಾರಿಗಳು ಜ್ಯೂಸ್ ಮಾರಾಟ ಕೌಂಟರ್ ಅನ್ನು ಬಂದ್ ಮಾಡಿಸಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಆಹಾರ ಸುರಕ್ಷತೆಯ ವಿಚಾರದಲ್ಲಿ ದೊಡ್ಡ ಬ್ರ್ಯಾಂಡ್‌ಗಳು ಮತ್ತು ಸಣ್ಣ ಅಂಗಡಿಗಳು ಎಂಬ ತಾರತಮ್ಯವಿಲ್ಲ. ಎಲ್ಲ ಆಹಾರ ಉದ್ದಿಮೆಗಳಿಗೂ ಒಂದೇ ನಿಯಮ ಅನ್ವಯವಾಗಲಿದ್ದು, ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ವ್ಯಾಪಾರ ಮಾಡುವುದರಷ್ಟೇ ಸಾರ್ವಜನಿಕರ ಆರೋಗ್ಯ ಕಾಪಾಡುವುದೂ ಮುಖ್ಯ. ಎಲ್ಲಿಯಾದರೂ ಅಶುಚಿಯಾದ ಆಹಾರ, ಅಸುರಕ್ಷಿತ ಪ್ಯಾಕಿಂಗ್ ಅಥವಾ ಆಹಾರ ವಿತರಣೆಯಲ್ಲಿ ಲೋಪ ಕಂಡುಬಂದರೆ ಆಹಾರ ಸುರಕ್ಷತಾ ಇಲಾಖೆಯ ಸಂಜ್ಞೆಯನ್ನು ಸ್ಕ್ಯಾನ್ ಮಾಡುವ ಮೂಲಕ ದೂರು ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಪ್ರತಿಯೊಂದು ದೂರನ್ನೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
