ಬೆಂಗಳೂರು,ನ.6- ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಪೈಪೋಟಿ ನಡೆಸುತ್ತಿರುವಾಗ, ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವಾಗಿರುವ ಕರ್ನಾಟಕದಲ್ಲಿ 191 ಎಂಬಿಬಿಎಸ್ ಸೀಟುಗಳು ಖಾಲಿ ಉಳಿದಿರುವುದು ಅಚ್ಚರಿ ಮೂಡಿಸಿದೆ.
ವೈದ್ಯಕೀಯ ಸೀಟುಗಳಿಗೆ ಭಾರೀ ಬೇಡಿಕೆಯಿದ್ದರೂ, ದುಬಾರಿ ಶುಲ್ಕ, ಖಾಸಗಿ ಕಾಲೇಜುಗಳ ಮೇಲಿನ ಅವಲಂಬನೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಕೆಲವು ಸೀಟುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
2026ನೇ ಸಾಲಿನಲ್ಲಿ ದೇಶದ 839 ವೈದ್ಯಕೀಯ ಕಾಲೇಜುಗಳಲ್ಲಿರುವ ಸುಮಾರು 1.4 ಲಕ್ಷ ಎಂಬಿಬಿಎಸ್ ಸೀಟುಗಳಿಗಾಗಿ ಬರೋಬ್ಬರಿ 23 ಲಕ್ಷ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇಷ್ಟೊಂದು ತೀವ್ರ ಪೈಪೋಟಿಯ ನಡುವೆಯೂ ಕರ್ನಾಟಕದಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡಾಗ 191 ಸೀಟುಗಳು ಭರ್ತಿಯಾಗದೆ ಉಳಿದಿವೆ. ದೇಶಾದ್ಯಂತ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ಬಳಿಕ ಸುಮಾರು 2,000 ಎಂಬಿಬಿಎಸ್ ಸೀಟುಗಳು ಖಾಲಿ ಉಳಿದಿರುವುದು ವೈದ್ಯಕೀಯ ಶಿಕ್ಷಣದ ವೆಚ್ಚ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಎತ್ತಿ ತೋರಿಸಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರದ ಮೆಡಿಕಲ್ ಕೌನ್ಸೆಲಿಂಗ್ ಸಮಿತಿ ಅಕ್ಟೋಬರ್ 30ರಂದು ದೇಶಾದ್ಯಂತ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ವಿಶೇಷ ಸ್ಟ್ರೇ ವೇಕೆನ್ಸಿ ರೌಂಡ್ ಕೌನ್ಸೆಲಿಂಗ್ ನಡೆಸುವುದಾಗಿ ಘೋಷಿಸಿದೆ.
ಸೀಟುಗಳ ಸಂಖ್ಯೆಯಲ್ಲಿ ಕರ್ನಾಟಕ ನಂಬರ್ ಒನ್
ದೇಶದಲ್ಲೇ ಅತಿ ಹೆಚ್ಚು ಎಂಬಿಬಿಎಸ್ ಸೀಟುಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. 76 ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 15,745 ಸೀಟುಗಳು ಲಭ್ಯವಿವೆ. ಈ ವರ್ಷ ರಾಜ್ಯಕ್ಕೆ ಹೆಚ್ಚುವರಿ 1,650 ಸೀಟುಗಳು ಸೇರ್ಪಡೆಯಾಗಿವೆ. ಒಟ್ಟು ಸೀಟುಗಳಲ್ಲಿ ಶೇ.71ರಷ್ಟು ಅಂದರೆ 11,145 ಸೀಟುಗಳು ಖಾಸಗಿ ವಲಯದಲ್ಲಿವೆ. ಹೀಗಾಗಿ ವೈದ್ಯಕೀಯ ಶಿಕ್ಷಣಕ್ಕೆ ಖಾಸಗಿ ಕಾಲೇಜುಗಳ ಮೇಲಿನ ಅವಲಂಬನೆ ರಾಜ್ಯದಲ್ಲಿ ಹೆಚ್ಚಾಗಿದೆ.
ಇನ್ನೊಂದೆಡೆ ಕರ್ನಾಟಕದಲ್ಲಿ ಈ ವರ್ಷ 1,45,466 ಮಂದಿ ನೀಟ್ ಪರೀಕ್ಷೆ ಮೂಲಕ ವೈದ್ಯಕೀಯ ಸೀಟುಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ. ದೇಶದ ರಾಜ್ಯಗಳ ಪೈಕಿ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಉತ್ತರಪ್ರದೇಶ 3,56,291, ಮಹಾರಾಷ್ಟ್ರ 2,22,905, ರಾಜಸ್ಥಾನ 2,03,470 ಮತ್ತು ಬಿಹಾರ 1,56,061 ಅಭ್ಯರ್ಥಿಗಳನ್ನು ಹೊಂದಿವೆ.
ಶುಲ್ಕವೇ ದೊಡ್ಡ ಅಡ್ಡಿ:
ಕರ್ನಾಟಕದಲ್ಲಿ ವೈದ್ಯಕೀಯ ಸೀಟುಗಳು ಖಾಲಿ ಉಳಿಯಲು ಪ್ರಮುಖ ಕಾರಣ ಖಾಸಗಿ ವೈದ್ಯಕೀಯ ಶಿಕ್ಷಣದ ದುಬಾರಿ ಶುಲ್ಕ ಎನ್ನಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ 25 ಲಕ್ಷದಿಂದ 45 ಲಕ್ಷ ರೂ.ವರೆಗೆ ತಲುಪುತ್ತಿದೆ. ಇದಕ್ಕೆ ಹಾಸ್ಟೆಲ್, ಊಟ, ಪುಸ್ತಕ, ಇತರ ವೆಚ್ಚಗಳನ್ನು ಸೇರಿಸಿದರೆ ಒಟ್ಟು ಖರ್ಚು ಸಾಮಾನ್ಯ ಕುಟುಂಬಗಳ ಕೈಗೆಟುಕದಂತಾಗಿದೆ.
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಾಮಾನ್ಯ ಸೀಟಿನ ವಾರ್ಷಿಕ ಶುಲ್ಕ 64,350 ರೂ.ಗಳಷ್ಟಿದೆ. ಆದರೆ ಎನ್‌ಆರ್‌ಐ ಕೋಟಾದಡಿ ಪ್ರವೇಶ ಪಡೆಯುವರಿಗೆ ಇದೇ ಸರ್ಕಾರಿ ಕಾಲೇಜುಗಳಲ್ಲಿ ವಾರ್ಷಿಕ 25,09,350 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಖಾಸಗಿ ಕಾಲೇಜುಗಳಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಸೀಟುಗಳಿಗೆ ವಾರ್ಷಿಕ 1,53,571 ರೂ. ಶುಲ್ಕವಿದ್ದರೆ, ಖಾಸಗಿ ಕೋಟಾದ ಸೀಟುಗಳಿಗೆ 12,00,117 ರೂಪಾಯಿ ಪಾವತಿಸಬೇಕು. ಎನ್‌ಆರ್‌ಐ ಮತ್ತು ಮ್ಯಾನೇಜ್‌ಮೆಂಟ್ ಕೋಟಾದ ಶುಲ್ಕ ಕಾಲೇಜಿನಿಂದ ಕಾಲೇಜಿಗೆ ಬದಲಾಗುತ್ತದೆ. ಕೆಲವು ಸಂಸ್ಥೆಗಳಲ್ಲಿ ಇದು ವಾರ್ಷಿಕ 45 ಲಕ್ಷ ರೂ.ವರೆಗೂ ತಲುಪುತ್ತದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ವೈದ್ಯಕೀಯ ಕಾಲೇಜುಗಳು ಶುಲ್ಕ ನಿಗದಿಪಡಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ದುಬಾರಿ ಶುಲ್ಕದಿಂದಾಗಿ ಅರ್ಹತೆ ಮತ್ತು ಆಸಕ್ತಿ ಇದ್ದರೂ ಅನೇಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಎನ್‌ಆರ್‌ಐ ಕೋಟಾ:
ಖಾಸಗಿ ಕಾಲೇಜುಗಳ ಸೀಟುಗಳಿಗೂ ಹೊಡೆತ:
ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2025ರಲ್ಲಿ ಎನ್‌ಆರ್‌ಐ ಕೋಟಾ ಪರಿಚಯಿಸಿರುವುದು ಖಾಸಗಿ ಕಾಲೇಜುಗಳ ಮ್ಯಾನೇಜ್‌ಮೆಂಟ್ ಕೋಟಾದ ಸೀಟುಗಳು ಖಾಲಿ ಉಳಿಯಲು ಮತ್ತೊಂದು ಕಾರಣ ಎನ್ನಲಾಗಿದೆ. ಸರ್ಕಾರಿ ಸಂಸ್ಥೆಗಳು ತಮ ಆದಾಯವನ್ನು ಹೆಚ್ಚಿಸಿಕೊಂಡು ಸರ್ಕಾರದ ಅನುದಾನದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿತ್ತು.
ಈ ವರ್ಷ ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 105 ಎನ್‌ಆರ್‌ಐ ಸೀಟುಗಳು ಲಭ್ಯವಿದ್ದು, ಪ್ರತಿ ಸೀಟಿಗೆ ವಾರ್ಷಿಕ ಸುಮಾರು 25.1 ಲಕ್ಷ ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು. ಈ ಕೋಟಾದಡಿ ಪ್ರವೇಶ ಪಡೆಯಲು ವಿದೇಶಿ ಬ್ಯಾಂಕ್ ಖಾತೆ ಅಥವಾ ಭಾರತೀಯ ಬ್ಯಾಂಕ್‌ನಲ್ಲಿರುವ ಎನ್‌ಆರ್‌ಐ/ಎನ್‌ಆರ್‌ಇ ಖಾತೆಯ ಮೂಲಕ ಶುಲ್ಕ ಪಾವತಿಸುವ ನಿಯಮವಿದೆ. ಆದರೆ ಎನ್‌ಆರ್‌ಐ ಸ್ಥಾನಮಾನ ಇಲ್ಲದಿದ್ದರೂ ಹೆಚ್ಚಿನ ಶುಲ್ಕ ಪಾವತಿಸುವ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಇತರರು ( ಅದರ್‌ರಸ) ಎಂಬ ಪ್ರತ್ಯೇಕ ಕೋಟಾ ಅವಕಾಶ ಕಲ್ಪಿಸುತ್ತದೆ. ಈ ಕೋಟಾದಡಿ ಭಾರತೀಯ ರೂಪಾಯಿಗಳಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ.
ಮೂಲಸೌಕರ್ಯಗಳ ಕೊರತೆಯೂ ಪ್ರವೇಶಕ್ಕೆ ಹಿನ್ನಡೆ: ಶುಲ್ಕದ ಹೊರತಾಗಿ ಕೆಲವು ಹೊಸ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಮೂಲಸೌಕರ್ಯಗಳ ಕೊರತೆಯೂ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕಲು ಕಾರಣವಾಗಿದೆ. ಹೊಸ ಕಾಲೇಜುಗಳಲ್ಲಿ ಏಕಾಏಕಿ ಸೀಟುಗಳ ಸಂಖ್ಯೆ ಹೆಚ್ಚಿಸಲಾಗಿದ್ದರೂ, ಅಗತ್ಯ ಸೌಲಭ್ಯಗಳು ಮತ್ತು ಗುಣಮಟ್ಟದ ವ್ಯವಸ್ಥೆಗಳು ಸಮರ್ಪಕವಾಗಿಲ್ಲ ಎಂಬ ಆರೋಪಗಳಿವೆ.
ಇಂದಿನ ವಿದ್ಯಾರ್ಥಿಗಳು ಕಾಲೇಜುಗಳ ಮೂಲಸೌಕರ್ಯ, ಬೋಧನಾ ಗುಣಮಟ್ಟ ಮತ್ತು ಸೌಲಭ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುವುದರಿಂದ ಪ್ರವೇಶ ಪಡೆಯುವ ಮುನ್ನವೇ ಕಾಲೇಜುಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಬಿಡಿಎಸ್ ಕಡೆಗೆ ವಿದ್ಯಾರ್ಥಿಗಳ ಒಲವು: ಎಂಬಿಬಿಎಸ್ ಸೀಟುಗಳ ದುಬಾರಿ ವೆಚ್ಚದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಬಿಡಿಎಸ್ ಸೇರಿದಂತೆ ಪರ್ಯಾಯ ವೈದ್ಯಕೀಯ ಕೋರ್ಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಈ ವರ್ಷವೂ ದಂತ ವೈದ್ಯಕೀಯ ಕೋರ್ಸ್‌ಗಳ ಎಲ್ಲ ಸೀಟುಗಳು ಭರ್ತಿಯಾಗಿರುವುದು ಗಮನಾರ್ಹ.
