ಬೆಂಗಳೂರು, ನ.6- ಮಳೆಗಾಲದಲ್ಲಿ ಉಂಟಾಗುವ ಜಲಾವೃತ ಸಮಸ್ಯೆ ನಿವಾರಣೆಗೆ ರೊಬೊಟಿಕ್ ತಂತ್ರಜ್ಞಾನ ಬಳಕೆಗೆ ಜಿಬಿಎ ಮುಂದಾಗಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿ ಜಲಾವೃತ ಸಮಸ್ಯೆ ಉಂಟಾಗುವುದನ್ನು ತಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರೊಬೊಟಿಕ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಎಚ್ಎಸ್ಆರ್ ಲೇಔಟ್ನಲ್ಲಿ ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರದ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸುವ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿದ್ದು, ಯಂತ್ರದ ಕಾರ್ಯಕ್ಷಮತೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬಳಕೆಗೆ ತರುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಚ್ಎಸ್ಆರ್ ಲೇಔಟ್ನಲ್ಲಿ ನಡೆದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮುಚ್ಚಿದ ರಾಜಕಾಲುವೆಗಳ ಒಳಭಾಗದಲ್ಲಿ ಯಂತ್ರದ ನೆರವಿನಿಂದ ಹೂಳು ತೆರವುಗೊಳಿಸುವ ಕಾರ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಗರದ ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆರು ಗಂಟೆಗಳಲ್ಲಿ ಹೂಳು ತೆರವು:ಎಚ್ಎಸ್ಆರ್ ಲೇಔಟ್ನ ರಾಜಕಾಲುವೆಯ ಸುಮಾರು 6 ಅಡಿ ಅಗಲ ಹಾಗೂ 30 ಅಡಿ ಉದ್ದದ ಪ್ರದೇಶದಲ್ಲಿ ಎರಡು ಅಡಿಗೂ ಹೆಚ್ಚು ಪ್ರಮಾಣದ ಹೂಳು ಸಂಗ್ರಹವಾಗಿತ್ತು. ಈ ಹೂಳನ್ನು ತೆರವುಗೊಳಿಸಲು ಯಂತ್ರದ ಮೂಲಕ ಸುಮಾರು ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಚ್ಎಸ್ಆರ್ ಲೇಔಟ್ನ 7ನೇ ಸೆಕ್ಟರ್ನ 17ನೇ ಕ್ರಾಸ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರಾಜಕಾಲುವೆಗಳನ್ನು ಸಮಗ್ರವಾಗಿ ಸ್ವಚ್ಛಗೊಳಿಸಿದರೆ ಪ್ರವಾಹದ ಸಮಸ್ಯೆ ತಗ್ಗಿಸಬಹುದು. ಹೀಗಾಗಿ, ಯಾವೆಲ್ಲ ಪ್ರದೇಶಗಳಲ್ಲಿ ಹೂಳು ತೆರವುಗೊಳಿಸುವ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮಹೇಶ್ವರ್ ರಾವ್ ಸೂಚಿಸಿದ್ದಾರೆ.
30 ಮೀಟರ್ವರೆಗೆ ಸ್ವಚ್ಛಗೊಳಿಸುವ ಸಾಮರ್ಥ್ಯ:
ಆರ್ಯನ್ ಸಂಸ್ಥೆಯ ಸೂಪರ್ ಸೆಕ್ಷನ್ ರೊಬೊಟಿಕ್ ಯಂತ್ರವು ಮುಚ್ಚಿದ ರಾಜಕಾಲುವೆಗಳ ಒಳಭಾಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸುಮಾರು 30 ಮೀಟರ್ ದೂರದವರೆಗೆ ಸ್ವಚ್ಛಗೊಳಿಸಬಲ್ಲ ಈ ಯಂತ್ರವನ್ನು ರಾಜಕಾಲುವೆಯೊಳಗೆ ಇಳಿಸಿ ವೈರ್ಲೆಸ್ ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಲಾಗುತ್ತದೆ.
ಯಂತ್ರದಲ್ಲಿರುವ ವ್ಯವಸ್ಥೆಯು ಹೂಳನ್ನು ಸಡಿಲಗೊಳಿಸಿದ ಬಳಿಕ ವ್ಯಾಕ್ಯೂಮ್ ಪೈಪ್ ಮೂಲಕ ಹೀರಿಕೊಳ್ಳುತ್ತದೆ. ಒಟ್ಟು 8,000 ಲೀಟರ್ ಸಾಮರ್ಥ್ಯದ ಸಂಗ್ರಹಣಾ ವ್ಯವಸ್ಥೆ ಹೊಂದಿರುವ ಯಂತ್ರದಲ್ಲಿ 6,000 ಲೀಟರ್ ಹೂಳು ಮತ್ತು ಕೆಸರು ಹಾಗೂ 2,000 ಲೀಟರ್ ನೀರನ್ನು ಸಂಗ್ರಹಿಸಬಹುದು. ಹೀರುವ ಮೂಲಕ ಸಂಗ್ರಹಿಸಿದ ಹೂಳು ಮತ್ತು ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆಯೂ ಇದೆ.
ಸಿಬ್ಬಂದಿ ಸುರಕ್ಷತೆಗೆ ಆದ್ಯತೆ:ರಾಜಕಾಲುವೆ ಸ್ವಚ್ಛತಾ ಕಾರ್ಯಾಚರಣೆ ವೇಳೆ ಯಂತ್ರ ನಿರ್ವಹಿಸುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ. ಮುಚ್ಚಿದ ಚರಂಡಿಗಳ ಒಳಭಾಗವನ್ನು ಸ್ವಚ್ಛಗೊಳಿಸುವಾಗ ಸಿಬ್ಬಂದಿಯ ಸುರಕ್ಷತೆಯೊಂದಿಗೆ ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೂ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದೇ ವೇಳೆ, ಮಳೆಗಾಲದಲ್ಲಿ ಸಿಲ್್ಕ ಬೋರ್ಡ್ ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ ಮಾರ್ಗವಾಗಿ ಉಂಟಾಗುವ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಮಳೆನೀರು ಚರಂಡಿ ಕಾಮಗಾರಿಯಲ್ಲಿ ಬಾಕ್್ಸ ಡ್ರೈನ್ ನಿರ್ಮಿಸುವ ಬದಲು ಮೂರು ಮೀಟರ್ ವ್ಯಾಸದ ಪೈಪ್ಲೈನ್ ಅಳವಡಿಸುವಂತೆ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕ್ರಮದಿಂದ ಮಳೆನೀರಿನ ಹರಿವನ್ನು ಸಮರ್ಪಕವಾಗಿ ನಿರ್ವಹಿಸಿ, ಪ್ರಮುಖ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ತಗ್ಗಿಸುವ ಉದ್ದೇಶ ಹೊಂದಲಾಗಿದೆ.ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಮತ್ತು ಮಾಲತಿ ಸೇರಿದಂತೆ ಕಾರ್ಯಪಾಲಕ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
