Homeರಾಜ್ಯನಾಳೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪೊಲೀಸರಿಂದ ಭಾರಿ ಬಿಗಿಭದ್ರತೆ

ನಾಳೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪೊಲೀಸರಿಂದ ಭಾರಿ ಬಿಗಿಭದ್ರತೆ

ಬೆಂಗಳೂರು,ನ.12- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಧಾನಿಯವರ ಸಂಚಾರ ಮತ್ತು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಲಿರುವ ಮೂರು ಪ್ರಮುಖ ಸ್ಥಳಗಳ ಸುತ್ತಲಿನ 1 ಕಿ.ಮೀ ವ್ಯಾಪ್ತಿಯನ್ನು ತಾತ್ಕಾಲಿಕ ನೋ-ಫ್ಲೈ ಝೋನ್‌ ಎಂದು ಘೋಷಿಸಲಾಗಿದೆ.

ಭದ್ರತಾ ಕಾರಣಗಳಿಂದ ಈ ನಿರ್ಬಂಧವು 11 ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಬಿಎನ್‌ಎಸ್‌‍ಎಸ್‌‍ ಸೆಕ್ಷನ್‌ 163ರ ಅಡಿಯಲ್ಲಿ ಈ ಆದೇಶ ಹೊರಡಿಸಿದ್ದಾರೆ.

ನಿಷೇಧಿತ ವಲಯದಲ್ಲಿ ಡ್ರೋನ್‌ಗಳು, ಮಾನವರಹಿತ ವೈಮಾನಿಕ ವಾಹನಗಳು, ಗ್ಲೈಡರ್‌ಗಳು, ಸಣ್ಣ ವಿಮಾನಗಳು ಹಾಗೂ ನಿಗದಿತವಲ್ಲದ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಅನುಮತಿಯಿಲ್ಲದೆ ಯಾವುದೇ ರೀತಿಯ ವೈಮಾನಿಕ ಚಟುವಟಿಕೆ ನಡೆಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಇಳಿಯಲಿರುವ ಬನ್ನೇರುಘಟ್ಟ ರಸ್ತೆಯ ಆರ್‌.ಎ.ಮಂಡುರ್ಕರ್‌ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಕೇಂದ್ರದ ಹೆಲಿಪ್ಯಾಡ್‌-2, ಅವರು ಉದ್ಘಾಟಿಸಲಿರುವ ತಾವರೆಕೆರೆ ಮೆಟ್ರೋ ನಿಲ್ದಾಣ ಹಾಗೂ ಉದ್ಘಾಟನೆಯ ಬಳಿಕ ವಿಶೇಷ ಕಾರ್ಯಕ್ರಮ ನಡೆಯಲಿರುವ ಐಐಎಂಬಿ ಸಭಾಂಗಣ ಈ ಮೂರು ಸ್ಥಳಗಳ ಸುತ್ತಲೂ 1 ಕಿ.ಮೀ ವ್ಯಾಪ್ತಿಯಲ್ಲಿ ಹಾರಾಟಕ್ಕೆ ನಿಷೇಧ ಅನ್ವಯವಾಗಲಿದೆ.

ನಿಷೇಧಾಜ್ಞೆಯ ಪ್ರತಿಗಳನ್ನು ರಾಜ್ಯ ಗುಪ್ತಚರ ಸಂಸ್ಥೆಗಳು, ಭಾರತೀಯ ವಾಯುಪಡೆ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಭದ್ರತಾ ವ್ಯವಸ್ಥೆಯ ಸಮನ್ವಯ ಮತ್ತು ಆದೇಶದ ಕಟ್ಟುನಿಟ್ಟಿನ ಜಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಅವರ ಬೆಂಗಳೂರು ಭೇಟಿಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ವಹಣೆ, ಭದ್ರತಾ ತಪಾಸಣೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳಗಳ ಸುತ್ತ ಪೊಲೀಸ್‌‍ ಬಂದೋಬಸ್ತ್‌ ಕೂಡ ಹೆಚ್ಚಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಹಾಗೂ ಹವ್ಯಾಸಿ ಡ್ರೋನ್‌ ಬಳಕೆದಾರರು ಪೊಲೀಸ್‌‍ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

RELATED ARTICLES

Latest News