ಮುಂಬೈ,ನ.12- ಬಾಲಿವುಡ್ ನಟಿ ಕರೀನಾ ಕಪೂರ್ ಅವರು ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದ ಪೆಂಡೆಂಟ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಆಭರಣದಲ್ಲಿ ಪವಿತ್ರ ಕುರಾನ್‌ನ ಆಯತುಲ್ ಕುರ್ಸಿ ಪದ್ಯ ಕೆತ್ತಲಾಗಿದೆ ಎನ್ನಲಾಗಿದೆ. ಇದನ್ನು ಫ್ಯಾಷನ್ ಪರಿಕರವಾಗಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್, ಕರೀನಾ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಕರೀನಾ ಕಪೂರ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು ಹಫೀಜ್ ಒತ್ತಾಯಿಸಿದ್ದಾರೆ. ಕುರಾನ್‌ನ ವಚನಗಳು ಮುಸ್ಲಿಮರಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿವೆ. ಅವುಗಳನ್ನು ಗೌರವದಿಂದ ಕಾಣಬೇಕು. ಕೆಲವರು ಧಾರ್ಮಿಕ ಶುದ್ಧೀಕರಣ ಮಾಡದೆ ಕುರಾನ್‌ನ ವಚನಗಳನ್ನು ಮುಟ್ಟುವುದನ್ನೂ ತಪ್ಪಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ತಮ್ಮ ಈ ಕ್ರಮ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದಿರುವ ಹಫೀಜ್, ಕಾಂಗ್ರೆಸ್ ನಾಯಕನಾಗಿ ಅಲ್ಲ, ಮುಸ್ಲಿಂ ಸಮುದಾಯದೊಂದಿಗಿನ ಸಂಬಂಧದ ಕಾರಣಕ್ಕೆ ಕಾನೂನು ನೋಟಿಸ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಕರೀನಾ ಅವರ ಸ್ಟೈಲಿಸ್ಟ್ ರಿಯಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ನಟಿಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಕರೀನಾ ಬೆಳ್ಳಿ ಕಫ್ತಾನ್ ಮತ್ತು ಪೇಟ ಧರಿಸಿದ್ದು, ಪೆಂಡೆಂಟ್ ಕೂಡ ಕಾಣಿಸಿಕೊಂಡಿದೆ.
