Homeರಾಜ್ಯನ.16ಕ್ಕೆ ನೂತನ ವಿಧಾನ ಪರಿಷತ್‌ ಸದಸ್ಯರ ಪ್ರಮಾಣ ವಚನ ಸ್ವೀಕಾರ

ನ.16ಕ್ಕೆ ನೂತನ ವಿಧಾನ ಪರಿಷತ್‌ ಸದಸ್ಯರ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ನ.12- ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಚುನಾಯಿತರಾಗಿರುವ ನೂತನ ಸದಸ್ಯರು ನ.16 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಅಂದು ಬೆಳಿಗ್ಗೆ 11 ಗಂಟೆಗೆ ವಿಕಾಸಸೌಧದ ಕೊಠಡಿ ಸಂಖ್ಯೆ 419ರಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಭಾಪತಿ ಸಲೀಂ ಅಹದ್‌ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವಿಧಾನ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ವಿಧಾನ ಪರಿಷತ್ತಿನ ದ್ವೈ ವಾರ್ಷಿಕ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿರುವ ಎ.ಪಿ.ರಂಗನಾಥ, ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿರುವ ಕೆ.ಎಂ.ಸುರೇಶ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿರುವ ಎಸ್‌‍.ವಿ.ಸಂಕನೂರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿರುವ ಶಶಿಲ್‌ ಜಿ. ನಮೋಶಿ ಅವರು ಮೇಲನೆಯ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಸ್ಥಾನದಿಂದ ಚಿದಾನಂದ್‌ ಎಂ.ಗೌಡ, ಎಸ್‌‍.ವಿ.ಸಂಕನೂರ, ಶಶಿಲ್‌ ಜಿ. ನಮೋಶಿ ಹಾಗೂ ಮಾಜಿ ಉಪ ಸಭಾಪತಿ ಪುಟ್ಟಣ್ಣ ಅವರು ನಿನ್ನೆ ನಿವೃತ್ತರಾಗಿದ್ದಾರೆ. ಆದರೆ, ಎಸ್‌‍.ವಿ.ಸಂಕನೂರ, ಶಶಿಲ್‌ ಜಿ. ನಮೋಶಿ ಅವರು ಮರು ಆಯ್ಕೆಯಾಗಿದ್ದಾರೆ. ಚಿದಾನಂದ್‌ ಎಂ.ಗೌಡ ಅವರು ಮರು ಸ್ಪರ್ಧೆ ಮಾಡಿರಲಿಲ್ಲ. ಪುಟ್ಟಣ್ಣ ಅವರು ಮರು ಆಯ್ಕೆ ಬಯಸಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳನ್ನು ಉಳಿಸಿಕೊಂಡಿದ್ದರೆ, ಕಾಂಗ್ರೆಸ್‌‍ ಒಂದು ಕ್ಷೇತ್ರವನ್ನು ಕಳೆದುಕೊಂಡಿದ್ದು, ಜೆಡಿಎಸ್‌‍ ಒಂದು ಕ್ಷೇತ್ರವನ್ನು ಪಡೆದುಕೊಂಡಂತಾಗಿದೆ.

RELATED ARTICLES

Latest News