ಬೆಂಗಳೂರು,ನ.12-ಮಗಳಿಗೆ ಅರಿಶಿಣ ಶಾಸ್ತ್ರ ಮಾಡಬೇಕಾದ ದಿನವೇ ಆಕೆಯ ಅಂತ್ಯಸಂಸ್ಕಾರ ಮಾಡುವಂತಾಯಿತಲ್ಲಾ ಎಂದು ಕುಟುಂಬಸ್ಥರ ಗೋಳು ಎಂತಹವರ ಹೃದಯ ಹಿಂಡುವಂತಿತ್ತು.ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಇನ್ನೇನು ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಮಗಳು ಸಿಂಧೂಶ್ರೀ ಮೃತದೇಹಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಮಹಾಲಕ್ಷ್ಮೀ ಲೇಔಟ್ ನಿವಾಸಿ ಸಿಂಧೂಶ್ರೀ (29) ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಇರುವ ಒಬ್ಬಳೇ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಮನೆಯವರೆಲ್ಲಾ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಸಂತೋಷವೇ ತುಂಬಿತ್ತು.
ಆದರೆ ವಿಧಿಯಾಟವೆಂಬಂತೆ ಕ್ಷಣಾರ್ಧದಲ್ಲಿ ಮಗಳ ಸಾವಿನ ಸುದ್ದಿ ಕೇಳಿ ಮದುವೆ ಮನೆ ಸೂತಕದ ಮನೆಯಾಗಿದೆ.
ಘಟನೆ ಬಗ್ಗೆ ಸಿಂಧೂಶ್ರೀ ಅವರ ತಂದೆ ನಂಜುಂಡಪ್ಪ ಅವರು ಮಾತನಾಡುತ್ತಾ, ಮಗಳು ಕೊನೆಯದಾಗಿ ಒಂದೇ ಒಂದು ಪತ್ರಿಕೆ ಕೊಟ್ಟು ಬರುತ್ತೇನೆ ಎಂದು ನನ್ನ ತಂಗಿ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದರು. ಆದರೆ ಈ ದುರಂತ ಆಗೋಯ್ತು ಎಂದು ಕಣ್ಣೀರಿಟ್ಟರು.ಇವತ್ತು ಅರಿಶಿಣ ಕಾರ್ಯಕ್ರಮವಿತ್ತು. ನಾಳೆ ಬಳೆ ಶಾಸ್ತ್ರ ಮುಗಿಸಿಕೊಂಡು ಕಲ್ಯಾಣ ಮಂಟಪಕ್ಕೆ ಹೋಗಬೇಕಿತ್ತು. ಆದರೆ ಎಲ್ಲಾ ಮುಗಿದೊಯ್ತು. ನನ್ನ ಮಗಳ ಮದುವೆ ಮಾಡೋ ಬದಲು ಅಂತ್ಯಸಂಸ್ಕಾರ ಮಾಡೋ ಹಾಗಾಯ್ತು, ದೊಡ್ಡ ಟ್ರಕ್ ಅದು, ನನಗೆ ಒಬ್ಬಳೇ ಮಗಳು, ಇನ್ನೊಬ್ಬಳು ನನ್ನ ತಂಗಿ ಮಗಳು ಎಂದು ಭಾವುಕರಾದರು.
ನಿನ್ನೆ ಮಧ್ಯಾಹ್ನ 3.30 ರ ಸುಮಾರಿನಲ್ಲಿ ಮೈಸೂರು ರಸ್ತೆಯ ದೀಪಾಂಜಲಿನಗರದ ಮೆಟ್ರೋ ನಿಲ್ದಾಣ ಸಮೀಪ ಅತಿ ವೇಗವಾಗಿ ಬಂದ ಟ್ರಕ್ ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಸಿಂಧೂಶ್ರೀ ಅವರ ತಲೆ ಮೇಲೆ ಟ್ರಕ್ ಚಕ್ರ ಹರಿದರೆ, ವಿದ್ಯಾಶ್ರೀ ಮೈಮೇಲೆ ಮತ್ತೊಂದು ಚಕ್ರ ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಇಬ್ಬರು ಯುವತಿಯರ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನೆರವೇರಿದ್ದು, ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಮನೆಗೆ ಮೃತದೇಹಗಳು ಬರುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
