Homeರಾಜ್ಯಸ್ಟಿಂಗ್‌ ಪ್ರಕರಣ: ವಿಡಿಯೋ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದ ಕೃಪಾ ಆಳ್ವ

ಸ್ಟಿಂಗ್‌ ಪ್ರಕರಣ: ವಿಡಿಯೋ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದ ಕೃಪಾ ಆಳ್ವ

ಬೆಂಗಳೂರು, ನ.12- ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಖಾಸಗಿ ಮಾಧ್ಯಮದ ಪತ್ರಕರ್ತರು ಮತ್ತು ಅವರೊಂದಿಗೆ ಬಂದಿದ್ದ ಮತ್ತಿಬ್ಬರು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್‌‍ ಮಾಜಿ ನಾಯಕಿ ಕೃಪಾ ಆಳ್ವ ಹೇಳಿದ್ದಾರೆ.

ಈ ಮೂಲಕ ಸ್ಟಿಂಗ್‌ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಂತಾಗಿದೆ. ಮೂರನೇ ಬಾರಿ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಕೃಪಾ ಆಳ್ವ, ಪ್ರಕರಣದ ಬಗ್ಗೆ ಸ್ಪಷ್ಟ ವಿವರಣೆ ನೀಡಿ ಎಲ್ಲಾ ಮಾಹಿತಿ ನೀಡಿದ ಹೊರತಾಗಿಯೂ ಪದೇ ಪದೇ ತಮಗೆ ನೋಟಿಸ್‌‍ ಕೊಟ್ಟು ವಿಚಾರಣೆಗೆ ಬರುವಂತೆ ಕಿರುಕುಳ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನಿಖೆಯ ಉದ್ದೇಶವೆ ತಮಗೆ ಅರ್ಥವಾಗುತ್ತಿಲ್ಲ. ಯಾವ ದೃಷ್ಟಿಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂಬು ದನ್ನಾದರೂ ಸ್ಪಷ್ಟಪಡಿಸಿ. ಈ ಪ್ರಕರಣದಲ್ಲಿ ನಾನೂ ಯಾವುದೇ ತಪ್ಪು ಮಾಡಿಲ್ಲ. ತಮೊಂದಿಗೆ ಬಂದಿದ್ದ ಪತ್ರಕರ್ತರು ವಿಡಿಯೋ ಮಾಡಿರುವುದು ನನಗೇ ಗೊತ್ತೇ ಇರಲಿಲ್ಲ ಎಂದಿದ್ದಾರೆ.

ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಮಾಹಿತಿ ಕಲೆ ಹಾಕಲು ಸಿಸಿಬಿ ಆಳವಾದ ತನಿಖೆ ನಡೆಸುತ್ತಿದೆ. ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ್ದು ಹಾಗೂ ಹಂಚಿಕೆ ಮಾಡಿದ್ದು ಒಂದು ಭಾಗದ ತನಿಖೆಯಾದರೆ, ಪ್ರಸಾರವಾಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಯಾವ ಕಾರಣಕ್ಕಾಗಿ ಸ್ಟಿಂಗ್‌ ಆಪರೇಷನ್‌ ನಡೆಸಲಾಯಿತು ಎಂಬ ವಿವರ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ.

ಖಾಸಗಿ ಚಾನೆಲ್‌ನ ಮುಖ್ಯಸ್ಥರನ್ನು ಹಲವು ಬಾರಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ. ಕೃಪಾ ಆಳ್ವ ಅವರು ಪ್ರಕರಣ ಬಯಲಿಗೆ ಬರುತ್ತಿದ್ದಂತೆ ವಿಚಾರಣೆಗೆ ಹಾಜರಾದ ನಂತರ ವಿದೇಶಕ್ಕೆ ತೆರಳಿದ್ದರು.

ಅವರು ವಿದೇಶದಿಂದ ಮರಳಿ ಬಂದ ನಂತರ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ನೋಟೀಸ್‌‍ ನೀಡಿ, ತಮ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಅದರಂತೆ ಅವರು ವಿಚಾರಣೆಗೆ ಹಾಜರಾಗಿದ್ದರು. ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಕೆಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News