ಪುಣೆ, ನ.15- ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುಣೆ ವಿಮಾನ ನಿಲ್ದಾಣಕ್ಕೆ ಮರಳಿದೆ.ವಿಮಾನದಲ್ಲಿದ್ದ 192 ಮಂದಿ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಲ್ಯಾಂಡಿಂಗ್ ಗೇರ್ (ಚಕ್ರಗಳ ವ್ಯವಸ್ಥೆ) ಮೇಲಕ್ಕೆ ಮಡಚಿಕೊಳ್ಳದೆ ಕೆಳಗಿನ ಸ್ಥಿತಿಯಲ್ಲೇ ಉಳಿದಿದೆ ಎಂದು ಪೈಲಟ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ಎಟಿಸಿ) ಮಾಹಿತಿ ನೀಡಿದ್ದರು ಎಂದು ಪುಣೆ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣವೇ ವಿಮಾನ ನಿಲ್ದಾಣದ ಅಧಿಕಾರಿಗಳು ಎಟಿಸಿ, ಇಂಡಿಗೋ ಹಾಗೂ ಸಂಬಂಧಪಟ್ಟ ಇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿದರು. ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಭಾರತೀಯ ವಾಯುಪಡೆಯು (ಐಎಎಫ್) ಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಇದರ ಬೆನ್ನಲ್ಲೇ ತುರ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು.
ಯಾವುದೇ ಅನಾಹುತ ಸಂಭವಿಸಿದರೆ ತಕ್ಷಣ ಸ್ಪಂದಿಸಲು ಹಾಗೂ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಖಚಿತಪಡಿಸಲು ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್‌ಗಳು ಮತ್ತು ಇತರ ತುರ್ತು ಸೇವಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವು ರನ್‌ವೇ ಮೇಲಿಂದ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿತು. ಈ ವೇಳೆ ವಿಮಾನದ ಲ್ಯಾಂಡಿಂಗ್ ಗೇರ್ ಸ್ಥಿತಿಯನ್ನು ಅಧಿಕಾರಿಗಳು ದೃಷ್ಟಿಗೋಚರವಾಗಿ ಪರಿಶೀಲಿಸಿದರು. ಪರಿಶೀಲನೆಯ ಬಳಿಕ ಇಂದು ಬೆಳಗ್ಗೆ 9.04ಕ್ಕೆ ವಿಮಾನವು ಪುಣೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಇಳಿದ ಬಳಿಕ ನಿಗದಿತ ತುರ್ತು ಕ್ರಮದಂತೆ ಮೂರು ಅಗ್ನಿಶಾಮಕ ವಾಹನಗಳು ಮತ್ತು ಎರಡು ಆಂಬುಲೆನ್ಸ್‌ಗಳ ಬೆಂಗಾವಲಿನಲ್ಲಿ ಅದನ್ನು ಬೇ ನಂಬರ್ 7ಕ್ಕೆ ಕರೆದೊಯ್ಯಲಾಯಿತು.
ವಿಮಾನ ಸುರಕ್ಷಿತವಾಗಿದ್ದು, ಸಾಮಾನ್ಯ ಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಬೆಳಗ್ಗೆ 9.10ಕ್ಕೆ ಎಟಿಸಿ ಪೂರ್ಣ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಿತು.
ನಂತರ ವಿಮಾನಕ್ಕೆ ಏರೋಬ್ರಿಡ್ಜ್ ಸಂಪರ್ಕ ಕಲ್ಪಿಸಲಾಗಿದ್ದು, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 192 ಮಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯಗಳಾಗಿಲ್ಲ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಇದೇ ವೇಳೆ, ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರಿನಿಂದ ಮತ್ತೊಂದು ವಿಮಾನವನ್ನು ಪುಣೆಗೆ ತರಲು ಇಂಡಿಗೋ ವ್ಯವಸ್ಥೆ ಮಾಡುತ್ತಿದೆ. ಈ ಪರ್ಯಾಯ ವಿಮಾನದ ಮೂಲಕ ಪ್ರಯಾಣಿಕರನ್ನು ಗುವಾಹಟಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
