ಕನಕಪುರ,ನ.17- ತಾಲೂಕಿನ ಸಾತನೂರು ಹೋಬಳಿಯ ಸೂರನಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ನಾಲ್ಕು ವಷರ್ದ ಚಿರತೆ ಸೆರೆಯಾಗಿದ್ದು, ಚಿರತೆ ಹಾವಳಿಯಿಂದ ಆತಂಕಕ್ಕೀಡಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ ಬೆಳಿಗ್ಗೆ ಗ್ರಾಮದ ಅಮೃತ್ ಅರ್ಜುನ್ ಅವರಿಗೆ ಸೇರಿದ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ.
ಕಳೆದ ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಜನರು ಭಯಭೀತರಾಗಿದ್ದರು. ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇರಿಸಿತ್ತು. ಅದರಂತೆ ನಾಲ್ಕು ವರ್ಷದ ಚಿರತೆ ಬೋನಿಗೆ ಬಿದ್ದಿದೆ.
ಡಿಆರ್ಎಫ್ಒ ಸಂತೋಷ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಗೆ ಅಗತ್ಯ ಚಿಕಿತ್ಸೆ ನೀಡಿ, ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ರವಾನಿಸಿದ್ದಾರೆ. ಚಿರತೆ ಸೆರೆಯಾಗಿರುವುದರಿಂದ ಸೂರ್ಯನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಿಂದ ನಿರಾಳರಾಗಿದ್ದಾರೆ.
