Homeಅಂತಾರಾಷ್ಟ್ರೀಯNSA ಅಜಿತ್ ದೋವಲ್‌ಗೆ ಸಮನ್ಸ್ ಜಾರಿ ಮಾಡಲು ಅಮೆರಿಕ ಕೋರ್ಟ್ ಸೂಚನೆ

NSA ಅಜಿತ್ ದೋವಲ್‌ಗೆ ಸಮನ್ಸ್ ಜಾರಿ ಮಾಡಲು ಅಮೆರಿಕ ಕೋರ್ಟ್ ಸೂಚನೆ

ವಾಷಿಂಗ್ಟನ್‌, ನ. 19 (ಪಿಟಿಐ): ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ದಾಖಲಿಸಿರುವ ದಾವೆಯೊಂದಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಾ ಮಾಜಿ ಮುಖ್ಯಸ್ಥ ಸಾಮಂತ್ ಗೋಯಲ್ ಅವರಿಗೆ ದೆಹಲಿ ನ್ಯಾಯಾಲಯಗಳ ಮೂಲಕ ಸಮನ್ಸ್ ತಲುಪಿಸುವಂತೆ ಅಮೆರಿಕದ ಫೆಡರಲ್ ನ್ಯಾಯಾಲಯವೊಂದು ಆದೇಶಿಸಿದೆ.

ಪನ್ನುನ್ ವಿರುದ್ಧ ಭಾರತೀಯ ತನಿಖಾ ಸಂಸ್ಥೆಗಳು ವಿವಿಧ ಭಯೋತ್ಪಾದನಾ ಆರೋಪಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿವೆ ಮತ್ತು ಆತನಿಗಾಗಿ ಹುಡುಕಾಟ ನಡೆಸುತ್ತಿವೆ. ನವೆಂಬರ್ 13ರಂದು ಹೊರಡಿಸಿದ ಆದೇಶದಲ್ಲಿ, ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯವು ಅಜಿತ್ ದೋವಲ್ ಅವರಿಗೆ ಸಂಬಂಧಿಸಿದ ಸಮನ್ಸ್ ಮತ್ತು ನ್ಯಾಯಾಂಗ ದಾಖಲೆಗಳನ್ನು ಪಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸುವಂತೆ ಹಾಗೂ ಸಾಮಂತ್ ಗೋಯಲ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ದ್ವಾರಕಾ ಮತ್ತು ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳಿಗೆ ಕಳುಹಿಸುವಂತೆ ತನ್ನ ಸಿಬ್ಬಂದಿಗೆ ನಿರ್ದೇಶನ ನೀಡಿದೆ.

ಈ ನ್ಯಾಯಾಲಯದ ಮುಂದೆ ಬಾಕಿ ಇರುವ ಸಿವಿಲ್ ದಾವೆಯಲ್ಲಿ ಪ್ರತಿವಾದಿಗಳಿಗೆ ನ್ಯಾಯಾಲಯದ ಸಮನ್ಸ್ ತಲುಪಿಸುವ ಪ್ರಕ್ರಿಯೆಯಲ್ಲಿ ಸಹಕರಿಸಬೇಕೆಂದು ಭಾರತೀಯ ನ್ಯಾಯಾಲಯಗಳನ್ನು ಗೌರವಪೂರ್ವಕವಾಗಿ ಕೋರಲಾಗಿದೆ ಎಂದು ನ್ಯಾಯಾಧೀಶೆ ಕ್ಯಾಥರೀನ್ ಪೋಲ್ಕ್ ಫೈಲ್ಲಾ ಅವರ ಆದೇಶದಲ್ಲಿ ತಿಳಿಸಲಾಗಿದೆ.

ಹೇಗ್ ಕನ್ವೆನ್ಷನ್‌ಗಳು ಮತ್ತು ಭಾರತೀಯ ಸಿವಿಲ್ ಪ್ರಕ್ರಿಯಾ ಸಂಹಿತೆಯ ಸಂಬಂಧಿತ ನಿಬಂಧನೆಗಳನ್ನು ಉಲ್ಲೇಖಿಸಿರುವ ನ್ಯಾಯಾಧೀಶೆ ಫೈಲ್ಲಾ, ವಿದೇಶಿ ನ್ಯಾಯಾಲಯಗಳು ಭಾರತೀಯ ನ್ಯಾಯಾಲಯಗಳ ಮೂಲಕ ದೋವಲ್ ಮತ್ತು ಗೋಯಲ್ ಅವರಿಗೆ ಸಮನ್ಸ್ ತಲುಪಿಸಬಹುದು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಅಧಿಸೂಚಿಸಿದ ವಿದೇಶಿ ಸಿವಿಲ್ ನ್ಯಾಯಾಲಯಗಳು ಹೊರಡಿಸುವ ಸಮನ್ಸ್‌ಗಳನ್ನು ಭಾರತೀಯ ನ್ಯಾಯಾಲಯಗಳಿಗೆ ಕಳುಹಿಸಲು ಮತ್ತು ದೇಶೀಯ ನ್ಯಾಯಾಲಯಗಳು ಹೊರಡಿಸುವ ಸಮನ್ಸ್‌ಗಳಂತೆಯೇ ಅವುಗಳನ್ನು ಜಾರಿಗೊಳಿಸಲು (ತಲುಪಿಸಲು) ಸಿಪಿಸಿ ಅವಕಾಶ ನೀಡುತ್ತದೆ.

ಹೇಗ್ ಕನ್ವೆನ್ಷನ್ ಅಡಿಯಲ್ಲಿ ಭಾರತದ ಕೇಂದ್ರ ಪ್ರಾಧಿಕಾರದ ಮೂಲಕ ಸಮನ್ಸ್ ತಲುಪಿಸುವ ಪ್ರಮಾಣಿತ ವಿಧಾನವನ್ನು ಅನುಸರಿಸಲು ಪ್ರಯತ್ನಿಸಲಾಗಿತ್ತು, ಆದರೆ ಅದನ್ನು ತಿರಸ್ಕರಿಸಲಾಯಿತು ಎಂದು ಅಮೆರಿಕದ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತರುವಾಯ, ನ್ಯಾಯಾಲಯವು ಕನ್ವೆನ್ಷನ್‌ನ 19ನೇ ವಿಧಿ ಮತ್ತು ಭಾರತದ ಸಿಪಿಸಿಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಮನ್ಸ್ ತಲುಪಿಸಲು ಪರ್ಯಾಯ ಮಾರ್ಗವನ್ನು ಅನುಮೋದಿಸಿತು.

ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್‌ನ ಕಾನೂನು ಸಲಹೆಗಾರರಾಗಿರುವ ಅಮೆರಿಕ ನಿವಾಸಿ ಪನ್ನುನ್, ತನ್ನ ಜೀವದ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿ ಪರಿಹಾರ ಕೋರಿ ಈ ಸಿವಿಲ್ ದಾವೆಯನ್ನು ಹೂಡಿದ್ದಾರೆ. ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ರಾ ಸಹಾಯದೊಂದಿಗೆ ತನ್ನನ್ನು ಹತ್ಯೆ ಮಾಡುವ ಸಂಚನ್ನು ಅಜಿತ್ ದೋವಲ್ ರೂಪಿಸಿದ್ದಾರೆ ಎಂದು ಪನ್ನುನ್ ಆರೋಪಿಸಿದ್ದಾರೆ.

ಕಳೆದ ತಿಂಗಳು, ಅಮೆರಿಕದ ವಿದೇಶಾಂಗ ಇಲಾಖೆಯು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸುವ ಮೂಲಕ ದೋವಲ್ ಮತ್ತು ಗೋಯಲ್ ಅವರಿಗೆ ಸಮನ್ಸ್ ತಲುಪಿಸಲು ಪ್ರಯತ್ನಿಸಿತ್ತು. ಭಾರತವು ಈ ದಾವೆಯನ್ನು ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಎಂದು ಕರೆದು ತಿರಸ್ಕರಿಸಿದೆ.

“ನಮ್ಮ ಉನ್ನತ ಅಧಿಕಾರಿಗಳ ವಿರುದ್ಧ ಮಾಡಲಾದ ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ದಾಳಿಗಳನ್ನು ನಾವು ತಿರಸ್ಕರಿಸುತ್ತೇವೆ. ಹಾಗೆಯೇ, ಈ ಆಧಾರರಹಿತ ಮೊಕದ್ದಮೆಗಳನ್ನೂ ನಾವು ತಳ್ಳಿಹಾಕುತ್ತೇವೆ. ಭಾರತದಲ್ಲಿ ನ್ಯಾಯಾಂಗ ದಾಖಲೆಗಳನ್ನು ತಲುಪಿಸುವ (ಸರ್ವ್ ಮಾಡುವ) ಪ್ರಕ್ರಿಯೆಯು ಭಾರತ ಸರ್ಕಾರವು ಇದಕ್ಕಾಗಿ ಗೊತ್ತುಪಡಿಸಿರುವ ಕೇಂದ್ರ ಪ್ರಾಧಿಕಾರದ ಮೂಲಕವೇ ನಡೆಯಬೇಕು. ಈ ಪ್ರಾಧಿಕಾರವು ಕಾನೂನು ಮತ್ತು ನ್ಯಾಯ ಸಚಿವಾಲಯವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ನವೆಂಬರ್ 10ರಂದು ತಿಳಿಸಿದ್ದರು.

RELATED ARTICLES

Latest News