ಬೆಂಗಳೂರು,ನ.20- ಮಗನನ್ನು ಕೊಂದು ಆತನ ತಾಯಿಯ ಕೊಲೆಗೆ ಯತ್ನಿಸಿ ಆರೋಪಿ ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸೋಹಮ್ ದಾಸ್ (18) ಕೊಲೆಯಾದ ದುರ್ದೈವಿ. ಈತ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು. ಇವರ ತಾಯಿ ಸೀಮಾದಾಸ್ ಅವರು ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನಗರದ ಖಾಸಗಿ ಕಂಪನಿಯೊಂದರ ಉದ್ಯೋಗಿ.
ಸೀಮಾದಾಸ್‌ಗೆ ಮೈಸೂರು ಮೂಲದ ಬ್ಯಾಂಕ್ ಉದ್ಯೋಗಿ ಸುದೀಪ್ ಎಂಬಾತನ ಪರಿಚಯವಾಗಿದೆ. ಆ ಸಂದರ್ಭದಲ್ಲಿ ಪತಿಯಿಂದ ದೂರವಾಗಿರುವ ವಿಚಾರವನ್ನು ಆತನಿಗೆ ತಿಳಿಸಿದ್ದಾರೆ. ತದ ನಂತರದಲ್ಲಿ ಪದನಾಭನಗರ ರಾಘವೇಂದ್ರ ಲೇಔಟ್‌ನ ಎಸ್‌ಆರ್‌ಆರ್‌ಕೆ ತುಳಸಿ ಅಪಾರ್ಟ್‌ಮೆಂಟ್‌ನ ಪ್ಲಾಟ್‌ವೊಂದರಲ್ಲಿ ಅಮ, ಮಗ, ಸುದೀಪ್ ಬಾಡಿಗೆಗೆ ವಾಸವಿದ್ದರು.
ಪ್ಲಾಟ್‌ನ್ನು ಬಾಡಿಗೆ ಪಡೆದುಕೊಳ್ಳುವಾಗ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಸುದೀಪ್ ತನ್ನ ಪತಿ ಎಂದು ಸೀಮಾದಾಸ್ ಹೇಳಿಕೊಂಡಿದ್ದಾರೆಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.ಈ ನಡುವೆ ಕಳೆದ ಆರು ತಿಂಗಳಿನಿಂದ ಸೀಮಾದಾಸ್ ಮನೆಯಲ್ಲಿ ಆಗಿಂದಾಗ್ಗೆ ಅವರುಗಳ ಮಧ್ಯೆಯೇ ಜಗಳ ಹಾಗೂ ಗಲಾಟೆಗಳು ನಡೆಯುತ್ತಿರುವ ಬಗ್ಗೆ ನೆರೆಹೊರೆಯವರು ಪ್ಲಾಟ್ ಮಾಲೀಕ ಮಲ್ಲಯ್ಯ ಅವರಿಗೆ ತಿಳಿಸಿದ್ದಾರೆ.
ಮಲ್ಲಯ್ಯ ಅವರು ಹಲವು ಬಾರಿ ಅವರಿಗೆ ಗಲಾಟೆ ಮಾಡದಂತೆ ಶಾಂತಿಯುತವಾಗಿ ನೆಲೆಸುವಂತೆ ತಿಳಿಸಿದ್ದರು. ಮತ್ತೆ ಏನಾದರೂ ಗಲಾಟೆ ಮಾಡಿದರೆ ಮನೆ ಖಾಲಿ ಮಾಡುವಂತೆಯೂ ಸೂಚಿಸಿದ್ದರು.ನ.16 ರಂದು ರಾತ್ರಿ 9.30 ರ ಸಮಯದಲ್ಲಿ ಮತ್ತೆ ಇವರ ಮನೆಯಲ್ಲಿ ಗಲಾಟೆ ಶಬ್ದ ಕೇಳಿದೆ. ಅಕ್ಕಪಕ್ಕದವರು ಮಾಲೀಕ ಮಲ್ಲಯ್ಯ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಅಂದು ಅವರು ಕಚೇರಿಯಲ್ಲಿದ್ದುದ್ದರಿಂದ ಸೆಕ್ಯೂರಿಟಿ ಗಾರ್ಡ್‌ನಿಂದ ಮಾಹಿತಿ ಪಡೆೆದುಕೊಂಡಾಗ, ಸದಸ್ಯಕ್ಕೆ ಯಾವುದೇ ಗಲಾಟೆ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಅಂದು ಮಲ್ಲಯ್ಯ ಅವರು ಸುಮನಾಗಿದ್ದಾರೆ.ನ.19 ರಂದು ರಾತ್ರಿ ಮಲ್ಲಯ್ಯ ಅವರು ತಮ ಪ್ಲಾಟ್ ಬಳಿ ಹೋಗಿ ಕಾಲಿಂಗ್ ಬೆಲ್ ಒತ್ತಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಗಾಬರಿಯಾದ ಮಲ್ಲಯ್ಯ ಅವರು ಸ್ನೇಹಿತರೊಂದಿಗೆ ಬನಶಂಕರಿ ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಪ್ಲಾಟ್‌ನ ಎಲ್ಲಾ ಬಾಗಿಲುಗಳು ಲಾಕ್ ಆಗಿರುವುದು ಕಂಡು ಬಂದಿದೆ.ಪೊಲೀಸರು ಕೀಮೇಕರ್ಸ್‌ನ್ನು ಕರೆಸಿಕೊಂಡಿ ಆತನ ಸಹಾಯದಿಂದ ಬಾಗಿಲುಗಳನ್ನು ತೆರೆದು ಮನೆಯೊಳಗೆ ಹೋದಾಗ ನೆಲ ಹಾಗೂ ಗೋಡೆಗಳ ಮೇಲೆ ರಕ್ತದ ಕಲೆಗಳು ಕಂಡು ಒಂದು ಕ್ಷಣ ಗಾಬರಿಯಾಗಿದೆ. ಕೊಠಡಿಯೊಳಗಿನಿಂದ ಯಾರೋ ಕೂಗುತ್ತಿರುವ ಶಬ್ಧ ಕೇಳಿ ಬಂದಿದೆ. ಕೀಮೇಕರ್ಸ್ ಸಹಾಯದಿಂದ ಆ ಕೊಠಡಿಯ ಬೀಗ ತೆಗೆದಾಗ ಸೀಮಾದಾಸ್ ಇರುವುದು ಕಂಡು ಬಂದಿದೆ.
ಈ ಬಗ್ಗೆ ವಿಚಾರಿಸಿದಾಗ ಪತಿ ಸುದೀಪ್ ನನ್ನ ಮಗ ಸೋಹಮ್ ದಾಸ್ ಜೊತೆ ಜಗಳವಾಡಿ ಚಾಕು ಹಾಗೂ ಹ್ಯಾಮರ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ನನ್ನ ಮೇಲೆಯೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಕೊಠಡಿಯಲ್ಲಿ ಕೂಡಿ ಹಾಕಿ ನಾಪತ್ತೆಯಾಗಿದ್ದಾರೆಂದು ತಿಳಿಸಿದ್ದಾರೆ. ನಂತರ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೀಮಾದಾಸ್ ಅವರ ಮಾತು ಕೇಳಿ ಮನೆಯನ್ನೆಲ್ಲಾ ಹುಡುಕಾಡಿದಾಗ ಬಾತ್‌ರೂಮ್‌ನಲ್ಲಿ ಸೋಹಮ್‌ದಾಸ್ ಅವರ ಮೃತದೇಹ ಪತ್ತೆಯಾಗಿದೆ.ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ಸುದೀಪ್ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು ತಂಡಗಳು ಈಗಾಗಲೇ ಶೋಧ ನಡೆಸುತ್ತಿವೆ.ಆರೋಪಿ ಸಿಕ್ಕಿದ ನಂತರವೇ ಈ ಘಟನೆಗೆ ನಿಖರ ಕಾರಣವೇನೆಂಬುವುದು ತಿಳಿದು ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಈ ಸಂಜೆಗೆ ತಿಳಿಸಿದ್ದಾರೆ.
