ಬೆಂಗಳೂರು,ನ.20- ಕಾಲೇಜು ಆವರಣದಿಂದ ಹಾಡಹಗಲೇ ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿರುವ ಘಟನೆ ಮಂಗಳೂರಿನ ಉಲ್ಲಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯನ್ನು ಹಿಂದೂ ಯುವಕನೊಬ್ಬ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಕುಟುಂಬಸ್ಥರೇ ನಿನ್ನೆ ಕಾಲೇಜು ಬಳಿ ಬಂದು ಬಲವಂತವಾಗಿ ಆಕೆಯನ್ನು ಎಳೆದೊಯ್ದು ಥಾರ್ ಜೀಪಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಯನ್ನು ನೋಡಿದವರು ತಕ್ಷಣ ಉಲ್ಲಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿನ್ನೆ ಕಾಲೇಜು ಆವರಣಕ್ಕೆ ಬಂದ ಹಲವು ವ್ಯಕ್ತಿಗಳು ವಿದ್ಯಾರ್ಥಿನಿಯನ್ನು ಅಪಹರಿಸಿಕೊಂಡು ಹೋಗಿರುವ ದೃಶ್ಯ ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಪೊಲೀಸರು ಆ ವಿಡಿಯೋದಲ್ಲಿನ ದೃಶ್ಯಾವಳಿಯನ್ನು ಆಧರಿಸಿ ವಿದ್ಯಾರ್ಥಿನಿ ಹಾಗೂ ಅಪಹರಣಕಾರರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
