Homeರಾಜ್ಯಮತದಾರರ ಪಟ್ಟಿ ಲಭ್ಯವಾದ ತಕ್ಷಣವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

ಮತದಾರರ ಪಟ್ಟಿ ಲಭ್ಯವಾದ ತಕ್ಷಣವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

ಬೆಂಗಳೂರು, ನ.20- ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಮತದಾರರ ಪಟ್ಟಿ ಲಭ್ಯವಾದ ತಕ್ಷಣವೇ ರಾಜ್ಯದ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅಮರೇಶ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌) ಪ್ರಕ್ರಿಯೆ ಆರಂಭಿಸಿತು. ಆರಂಭದಲ್ಲಿ ಅಕ್ಟೋಬರ್‌ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಬಳಿಕ ಅಕ್ಟೋಬರ್‌ 17ಕ್ಕೆ ದಿನಾಂಕ ನಿಗದಿಪಡಿಸಿ, ಅಂತಿಮವಾಗಿ ಅಕ್ಟೋಬರ್‌ 27ರಂದು ಪಟ್ಟಿ ಪ್ರಕಟಿಸಲಾಗಿದೆ ಎಂದು ವಿವರಿಸಿದ್ದಾರೆ.

ಪ್ರಕಟಿತ ಮತದಾರರ ಪಟ್ಟಿ ಸಾರ್ವಜನಿಕವಾಗಿ ಲಭ್ಯವಿದ್ದರೂ, ಕೇಂದ್ರ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಹಸ್ತಾಂತರಿಸಿಲ್ಲ. ಈ ಸಂಬಂಧ ಈಗಾಗಲೇ ಏಳೆಂಟು ಬಾರಿ ಪತ್ರ ಬರೆದು ಮನವಿ ಮಾಡಲಾಗಿದೆ. ಅಲ್ಲದೆ, ಖುದ್ದಾಗಿ ಭೇಟಿ ನೀಡಿ ಕೂಡ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗವು 2021ರ ಹಳೆಯ ಮತದಾರರ ಪಟ್ಟಿಯನ್ನೇ ನೀಡಿದರೆ ಗ್ರೇಟರ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾವಣೆಯನ್ನು ತಕ್ಷಣವೇ ನಡೆಸಲು ಸಾಧ್ಯವಿದೆ. ಆದರೆ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆಯ ಆಧಾರದ ಮೇಲೆ ಹೊಸ ಮತದಾರರ ಪಟ್ಟಿ ನೀಡಿದರೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗ ಪ್ರಮಾಣಪತ್ರ ಸಲ್ಲಿಸಿದೆ ಎಂದು ಹೇಳಿದರು.

ಡಿಸೆಂಬರ್‌ 31ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚುನಾವಣೆ ನಡೆಸುವಂತೆ ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಅಕ್ಟೋಬರ್‌ 7ರ ವೇಳೆಗೆ ವಿಶೇಷ ತೀವ್ರ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿ ಲಭ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿ ನ್ಯಾಯಾಲಯದ ನಿರ್ದೇಶನವನ್ನು ಒಪ್ಪಿಕೊಳ್ಳಲಾಗಿತ್ತು.

ಆದರೆ ಪಟ್ಟಿ ಪ್ರಕಟಣೆ ಸುಮಾರು 20 ದಿನ ವಿಳಂಬವಾಗಿದ್ದು, ಈಗಲೂ ಅಧಿಕೃತ ಮತದಾರರ ಪಟ್ಟಿ ರಾಜ್ಯ ಚುನಾವಣಾ ಆಯೋಗದ ಕೈ ಸೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಧಿಕೃತ ಮತದಾರರ ಪಟ್ಟಿ ದೊರೆತ ಬಳಿಕವೇ ಚುನಾವಣಾ ಸಿದ್ಧತೆಗಳನ್ನು ಆರಂಭಿಸಲು ಸಾಧ್ಯ. ಹೊಸ ಪಟ್ಟಿ ಬಂದರೆ ಎರಡು ತಿಂಗಳ ಪೂರ್ವಸಿದ್ಧತೆ ಹಾಗೂ ಒಂದು ತಿಂಗಳ ಚುನಾವಣಾ ಪ್ರಕ್ರಿಯೆಗೆ ಕಾಲಾವಕಾಶ ಅಗತ್ಯವಿದೆ.

ಮತಪೆಟ್ಟಿಗೆಗಳ ವ್ಯವಸ್ಥೆ, ಮತದಾರರ ಪಟ್ಟಿ, ಮತಗಟ್ಟೆಗಳ ಸಿದ್ಧತೆ ಮತ್ತು ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಹೀಗಾಗಿ ಅಧಿಕೃತ ಮತದಾರರ ಪಟ್ಟಿ ಇಲ್ಲದೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಚುನಾವಣೆ ನಡೆಸಲು ಕ್ಷೇತ್ರ ಪುನರ್ವಿಂಗಡಣೆ ಹಾಗೂ ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ವಾರ್ಡ್‌ಗಳ ಮೀಸಲಾತಿಯ ಕರಟು ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಅಂತಿಮ ಪಟ್ಟಿ ಪ್ರಕಟವಾಗಬೇಕು. ಅದಕ್ಕೆ ಕಾಲಾವಕಾಶಗಳ ಅಗತ್ಯ ಇದೆ ಎಂದು ಹೇಳಿದರು.

ಚುನಾವಣೆ ನಡೆಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ನಿಗದಿಪಡಿಸಿ ಚುನಾವಣಾ ಆಯೋಗಕ್ಕೆ ಬಿಡುಗಡೆ ಮಾಡಿದೆ. ಹೀಗಾಗಿ ಹಣಕಾಸಿನ ಕೊರತೆಯ ಸಮಸ್ಯೆ ಇಲ್ಲ. ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಮತದಾರರ ಪಟ್ಟಿ ದೊರೆಯುವುದಷ್ಟೇ ಈಗ ಪ್ರಮುಖ ಅಡಚಣೆಯಾಗಿದ್ದು, ಪಟ್ಟಿ ಕೈ ಸೇರಿದ ಕೂಡಲೇ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅಮರೇಶ್‌ ತಿಳಿಸಿದರು.

RELATED ARTICLES

Latest News