ಬೆಂಗಳೂರು,ನ.20- ಗ್ರಾಮ ಪಂಚಾಯತಿಗಳ ಸ್ವಾಧೀನ ಮತ್ತು ನಿರ್ವಹಣೆಯಲ್ಲಿರುವ 4828 ಕೆರೆಗಳ 11671 ಎಕರೆ ಒತ್ತುವರಿ ಆಗಿದ್ದು, ಇದರ ತೆರವಿಗೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಘೋಷಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು ನಡೆದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಹಾಗೂ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯ 16 ಸಾವಿರ ಕೋಟಿ ರೂ. ಕಾಮಗಾರಿಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 5927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 32504 ಕೆರೆಗಳಿದ್ದು, 11498 ಕೆರೆಗಳ 26873 ಎಕರೆ ಒತ್ತುವರಿಯಾಗಿತ್ತು. ಈ ಪೈಕಿ 6670 ಕೆರೆಗಳ 15201 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಇನ್ನೂ 4828 ಕೆರೆಗಳ 11671 ಎಕರೆ ಒತ್ತುವರಿ ತೆರವು ಮಾಡಬೇಕಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಕೆರೆಗಳ ಒತ್ತುವರಿ ತೆರವು ಮಾಡಿ, ಕೆರೆ ಹೂಳು ತೆಗೆದು, ರಾಜಕಾಲುವೆಗಳ ಮತ್ತು ಮಳೆ ನೀರು ಕಾಲುವೆಗಳ ಅಡೆತಡೆ ನಿವಾರಿಸಿದರೆ ಮಳೆಗಾಲದಲ್ಲಿ ಕೆರೆಗಳು ತುಂಬುವುದಲ್ಲದೆ, ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ. ಕೆರೆ ಒತ್ತುವರಿ ತೆರವಿಗೆ ಎಲ್ಲರೂ ಸಹಕರಿಸಬೇಕು, ಶ್ರಮಿಸಬೇಕು ಎಂದು ಕೋರಿದರು.
ರಸ್ತೆಗಳು ಪ್ರಗತಿಯ ಸೋಪಾನ: ಆರ್ಥಿಕತೆಗೆ ಬಲ
ರಸ್ತೆಗಳು ಪ್ರಗತಿಗೆ ಸೋಪಾನ. ಉತ್ತಮ ರಸ್ತೆಗಳಿದ್ದರೆ ಜನರ ಸುಗಮ ಸಂಚಾರವಷ್ಟೇ ಅಲ್ಲ, ಸರಕು ಸಾಗಣೆಯೂ ವೇಗವಾಗುತ್ತದೆ. ರೈತರಿಗೆ ತಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗಲಿದ್ದು, ಗ್ರಾಮೀಣ ಆರ್ಥಿಕತೆಗೆ ಬಲ ಬರಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮೂಲಸೌಕರ್ಯ ಹಾಗೂ ರಸ್ತೆ ಅಭಿವೃದ್ಧಿಗೆ ಇಂಬು ನೀಡಿ 10 ಸಾವಿರ ರೂ. ವಿನಿಯೋಗಿಸುತ್ತಿರುವುದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ಬಲ ಬರಲಿದೆ ಎಂದರು.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 199458 ಕಿ.ಮೀ ಉದ್ದದ ರಸ್ತೆ ಇದೆ. ಈ ರಸ್ತೆಗಳ ಪೈಕಿ ಕೆಲವು ಬಿಟಿ ರಸ್ತೆಗಳು ಮಳೆಯಿಂದ, ವಾಹನದಟ್ಟಣೆಯಿಂದ ಹಾಳಾಗಿವೆ. ಅಸ್ತಿತ್ವದಲ್ಲಿರುವ ಬಿಟಿ ರಸ್ತೆಗಳಲ್ಲಿ ಹದಗೆಟ್ಟ ರಸ್ತೆ, ಸಾಧಾರಣ ರಸ್ತೆ ಹಾಗೂ ಉತ್ತಮ ರಸ್ತೆ ಎಂದು ಗುರುತಿಸಿ, ಹಾಳಾದ ರಸ್ತೆಗಳ ಅಭಿವೃದ್ಧಿಗೆ 7000 ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ಹೆಚ್ಚಾಗಿ ಹಾಳಾಗಿರುವ ರಸ್ತೆಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಜೊತೆಗೆ ಅಸ್ತಿತ್ವದಲ್ಲಿರುವ ಪ್ರಮುಖ ಗ್ರಾಮೀಣ ರಸ್ತೆಗಳ ಮರು ಡಾಂಬರೀಕರಣಕ್ಕೆ 3000 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಈ ರಸ್ತೆಗಳನ್ನು 3 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
15 ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಬೇಕು
ಇಂದು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಈ ಸಭೆಗೆ ಕರೆಸಲಾಗಿದೆ. ಕಾರಣ ಸರ್ಕಾರ ಈಗಾಗಲೇ 15000 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಆಡಳಿತಾತಕ ಅನುಮೋದನೆ ನೀಡಿದ್ದು, ಮತ್ತೆ ಸಿಇಓಗಳು ಸರ್ಕಾರದ ಅನುಮೋದನೆಗೆ ಕಳಿಸುವ ಅಗತ್ಯವಿಲ್ಲ. ಅವರು ತಮ ಹಂತದಲ್ಲೇ ವಿನ್ಯಾಸ, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಗುಣಮಟ್ಟದ ರಸ್ತೆಗಳನ್ನು ಮಾಡಿಸಬೇಕು. ಈ ಕಾಮಗಾರಿ 15 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಗ್ರಾಮೀಣ ಕರ್ನಾಟಕಕ್ಕೆ ಲೋಕಾರ್ಪಣೆ ಮಾಡಬೇಕು ಎಂದು ತಿಳಿಸಿದರು.
ರಾಜ್ಯದ ಗ್ರಾಮಠಾಣಾ ವ್ಯಾಪ್ತ್ತಿಯಲ್ಲಿ ಗುಣಮಟ್ಟದ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ, ಡಿಆರ್.ಆರ್.ಪಿಯಲ್ಲಿ ಇಲ್ಲದ ಹೊಸ ಗ್ರಾಮೀಣ ರಸ್ತೆ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ 6 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು. ವಿಬಿಜಿ ರಾಮ್ ಜಿಯಡಿ ನಿನ್ನೆಯವರೆಗೆ 2 ಕೋಟಿ 68 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಅಂದರೆ ಪ್ರತಿ ನಿತ್ಯ ಸರಾಸರಿ ಎರಡೂವರೆ ಲಕ್ಷ ಅಕುಶಲ ಕಾರ್ಮಿಕರು ಕೆಲಸ ಮಾಡುತ್ತಿದ್ದು, ತೀವ್ರ ಬರ ಪರಿಸ್ಥಿತಿಯ ಸಮಯದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
