ಬೆಂಗಳೂರು, ನ.20- ಬಿ ಖಾತೆ ಹೊಂದಿರುವ ಆಸ್ತಿ ಮಾಲೀಕರಿಗೆ ಎ ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನೀಡಿದ್ದ ವಿಶೇಷ ಅವಕಾಶಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನದಡಿ ಕಳೆದ ಆರು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಒಟ್ಟು 787.66 ಕೋಟಿ ರೂ. ಆದಾಯ ಹರಿದುಬಂದಿದೆ.
ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ಪಾವತಿಸಬೇಕಿದ್ದ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರಿಂದ ಶೇ.2ಕ್ಕೆ ಇಳಿಸಿ ಸರ್ಕಾರ ವಿಶೇಷ ಅವಕಾಶ ಕಲ್ಪಿಸಿತ್ತು. ಇದರಿಂದ ಸಾವಿರಾರು ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿ ಖಾತೆ ಪರಿವರ್ತನೆಗೆ ಮುಂದಾಗಿದ್ದಾರೆ.
ಐದು ನಗರ ಪಾಲಿಕೆಗಳ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ನಗರ ಪಾಲಿಕೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ.
ನಗರ ಪಾಲಿಕೆವಾರು ಅರ್ಜಿ-ಆದಾಯದ ವಿವರ:
ಬೆಂಗಳೂರು ಉತ್ತÜ: 24,106 ಅರ್ಜಿಗಳು ಸಲ್ಲಿಕೆಯಾಗಿದ್ದು, 10,951 ಆಸ್ತಿ ಮಾಲೀಕರು ಶುಲ್ಕ ಪಾವತಿಸಿದ್ದಾರೆ. ಒಟ್ಟು ಆದಾಯ 206.44 ಕೋಟಿ ರೂ.
ಬೆಂಗಳೂರು ದಕ್ಷಿಣ: 17,809 ಅರ್ಜಿಗಳು ಸಲ್ಲಿಕೆಯಾಗಿದ್ದು, 8,383 ಮಂದಿ ಶುಲ್ಕ ಪಾವತಿಸಿದ್ದಾರೆ. ಆದಾಯ 188.18 ಕೋಟಿ ರೂ.
ಬೆಂಗಳೂರು ಕೇಂದ್ರ: 786 ಅರ್ಜಿಗಳು ಸಲ್ಲಿಕೆಯಾಗಿದ್ದು, 195 ಮಂದಿ ಶುಲ್ಕ ಪಾವತಿಸಿದ್ದಾರೆ. ಆದಾಯ 4.26 ಕೋಟಿ ರೂ.
ಬೆಂಗಳೂರು ಪಶ್ಚಿಮ: 23,153 ಅರ್ಜಿಗಳು ಸಲ್ಲಿಕೆಯಾಗಿದ್ದು, 10,599 ಮಂದಿ ಶುಲ್ಕ ಪಾವತಿಸಿದ್ದಾರೆ. ಆದಾಯ 195.23 ಕೋಟಿ ರೂ.
ಬೆಂಗಳೂರು ಪೂರ್ವ: 17,162 ಅರ್ಜಿಗಳು ಸಲ್ಲಿಕೆಯಾಗಿದ್ದು, 7,327 ಮಂದಿ ಶುಲ್ಕ ಪಾವತಿಸಿದ್ದಾರೆ. ಆದಾಯ 193.55 ಕೋಟಿ ರೂ.
ಈ ಐದು ನಗರ ಪಾಲಿಕೆಗಳಿಂದ ಒಟ್ಟು 83,016 ಅರ್ಜಿಗಳು ಸಲ್ಲಿಕೆಯಾಗಿದ್ದು, 37,455 ಆಸ್ತಿ ಮಾಲೀಕರು ಶುಲ್ಕ ಪಾವತಿಸಿದ್ದಾರೆ. ಒಟ್ಟಾರೆ 787.66 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
