Homeರಾಜ್ಯವಿವಿಧ ಇಲಾಖೆಗಳ 1,531 ವಿವಿಧ ಹುದ್ದೆಗಳ ನೇಮಕಾತಿಗೆ ಕೆಇಎ ಅಧಿಸೂಚನೆ

ವಿವಿಧ ಇಲಾಖೆಗಳ 1,531 ವಿವಿಧ ಹುದ್ದೆಗಳ ನೇಮಕಾತಿಗೆ ಕೆಇಎ ಅಧಿಸೂಚನೆ

ಬೆಂಗಳೂರು,ನ.21- ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 1,531 ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಿದೆ.

ಈ ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 1,311 ಹಾಗೂ ಕಲ್ಯಾಣ ಕರ್ನಾಟಕ ವೃಂದದ 220 ಹುದ್ದೆಗಳು ಸೇರಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್‌.ಪ್ರಸನ್ನ ತಿಳಿಸಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ 171 ಮಹಿಳಾ ಮೇಲ್ವಿಚಾರಕಿ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ 35 ಕೈಗಾರಿಕಾ ವಿಸ್ತರಣಾಧಿಕಾರಿ, ಸರ್ಕಾರಿ ಅಭಿಯೋಜಕರು ಕಮ್‌ ಸಹಾಯಕ ಸರ್ಕಾರಿ ವಕೀಲರು (320 ಹುದ್ದೆ), ರೇಷೆ ನಿರೀಕ್ಷಕರು (34), ಮಾರುಕಟ್ಟೆ ಮೇಲ್ವಿಚಾರಕರು (4), ಜವಳಿ ನಿರೀಕ್ಷಕರು (27), ಅರಣ್ಯ ರಕ್ಷಕರು (450), ಅಗ್ನಿಶಾಮಕ ಅಧಿಕಾರಿ (20), ಅಗ್ನಿಶಾಮಕ ಸಿಬ್ಬಂದಿ (470) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಹುದ್ದೆಗೆ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ ಹತ್ತನೇ ತರಗತಿಯಲ್ಲಿ ಅಭ್ಯರ್ಥಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿಗೆ ಅರ್ಹರಾಗುತ್ತಾರೆ ಎಂದಿದ್ದಾರೆ.ಈ ಎಲ್ಲ ಪರೀಕ್ಷೆಗಳಿಗೂ ಫೆಬ್ರವರಿ- ಮಾರ್ಚ್‌ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಈಗಿನಿಂದ ಸಿದ್ಧತೆ ಮಾಡಿಕೊಳ್ಳಲು ಸಲಹೆ ನೀಡಿದ್ದು, ನಿಖರವಾದ ದಿನಾಂಕಗಳನ್ನು ನಂತರ ತಿಳಿಸಲಾಗುತ್ತದೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ. ಪೂರ್ಣ ಮಾಹಿತಿಗೆ ಪ್ರತಿ ಇಲಾಖೆಗಳ ಅಧಿಸೂಚನೆಗಳನ್ನು ಪ್ರತ್ಯೇಕವಾಗಿಯೇ ನೋಡಿ ನಂತರ ಅರ್ಜಿ ಭರ್ತಿ ಮಾಡಲು ಸಲಹೆ ನೀಡಿದ್ದಾರೆ.

RELATED ARTICLES

Latest News