ನವದೆಹಲಿ,ನ.21- ಖಲಿಸ್ತಾನ್ ಪರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ದಾಖಲಿಸಿರುವ ಸಿವಿಲ್ ಮೊಕದ್ದಮೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸಂಶೋಧನೆ ಮತ್ತು ರಾ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್ ಅವರಿಗೆ ಅಮೆರಿಕದ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ಗಳನ್ನು ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.
ದೆಹಲಿಯ ಜಿಲ್ಲಾ ನ್ಯಾಯಾಲಯಗಳ ಮೂಲಕ ಸಮನ್್ಸಗಳನ್ನು ತಲುಪಿಸುವಂತೆ ಅಮೆರಿಕದ ನ್ಯಾಯಾಲಯ ನಿರ್ದೇಶಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇಂತಹ ಆಧಾರರಹಿತ ಮೊಕದ್ದಮೆಗಳನ್ನು ನಾವು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ.
ದೆಹಲಿಯ 3 ಜಿಲ್ಲಾ ನ್ಯಾಯಾ ಲಯಗಳಾದ ಪಟಿಯಾಲ ಹೌಸ್, ದ್ವಾರಕಾ ಮತ್ತು ತೀಸ್ ಹಜಾರಿ ನ್ಯಾಯಾಲಯಗಳ ಮೂಲಕ ಅಜಿತ್ ದೋವಲ್ ಮತ್ತು ಗೋಯೆಲ್ ಅವರಿಗೆ ನ್ಯಾಯಾಂಗ ದಾಖಲೆಗಳನ್ನು ಪರ್ಯಾಯವಾಗಿ ತಲುಪಿಸಲು ಅಮೆರಿಕದ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಅಂತಾರಾಷ್ಟ್ರೀಯ ಅಂಚೆ ಅಥವಾ ಕೊರಿಯರ್ ಮೂಲಕ ದಾಖಲೆಗಳನ್ನು ಕಳುಹಿಸುವಂತೆ ಅಮೆರಿಕ ನ್ಯಾಯಾಲಯದ ಗುಮಾಸ್ತರಿಗೆ ನಿರ್ದೇಶಿಸಲಾಗಿದೆ.
ಎಸ್ಎಫ್ಜೆ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ದಾಖಲಿಸಿರುವ ಸಿವಿಲ್ ಮೊಕದ್ದಮೆಯಲ್ಲಿ ನ್ಯೂಯಾರ್ಕ್ನ ದಕ್ಷಿಣ ಜಿಲ್ಲೆಯ ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಕ್ಯಾಥರೀನ್ ಪೋಲ್ಕ್ ಫೈಲ್ಲಾ ಈ ಆದೇಶವನ್ನು ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?:
ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ ಹಾಗೂ ಭಾರತದಲ್ಲಿ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ಮುಖ್ಯಸ್ಥನಾಗಿರುವ ಗುರುಪತ್ವಂತ್ ಸಿಂಗ್ ಪನ್ನುನ್, ತನ್ನ ಹತ್ಯೆಗೆ ಭಾರತೀಯ ಏಜೆಂಟರು ಸಂಚು ರೂಪಿಸಿದ್ದರು ಎಂದು ಆರೋಪಿಸಿ ಅಮೆರಿಕದ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾನೆ.
