Homeಅಂತಾರಾಷ್ಟ್ರೀಯಪನ್ನುನ್‌ ಹತ್ಯೆ ಸಂಚು ರೂಪಿಸಿದ್ದ ನಿಖಿಲ್‌ ಗುಪ್ತಾಗೆ 235 ತಿಂಗಳ ಜೈಲು ಶಿಕ್ಷೆ

ಪನ್ನುನ್‌ ಹತ್ಯೆ ಸಂಚು ರೂಪಿಸಿದ್ದ ನಿಖಿಲ್‌ ಗುಪ್ತಾಗೆ 235 ತಿಂಗಳ ಜೈಲು ಶಿಕ್ಷೆ

ನ್ಯೂಯಾರ್ಕ್‌, ನ.21- ನ್ಯೂಯಾರ್ಕ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 55 ವರ್ಷದ ನಿಖಿಲ್‌ ಗುಪ್ತಾ ಅವರಿಗೆ 235 ತಿಂಗಳ ಜೈಲು ಶಿಕ್ಷೆ ನೀಡಲಾಗಿದೆ.

ನ್ಯೂಯಾರ್ಕ್‌ನ ಸದರ್ನ್‌ ಡಿಸ್ಟ್ರಿಕ್ಟ್‌ ನ್ಯಾಯಾಲಯದ ನ್ಯಾಯಾಧೀಶ ವಿಕ್ಟರ್‌ ಮರೆರೊ ಅವರು, ಸುಮಾರು 80 ನಿಮಿಷಗಳ ವಿಚಾರಣೆಯ ನಂತರ ಗುಪ್ತಾ ಅವರಿಗೆ 235 ತಿಂಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದರು.ಗುಪ್ತಾ ಅವರು ಜೈಲು ಶಿಕ್ಷೆಯನ್ನು ಪೂರೈಸಿದ ನಂತರ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ ನ್ಯಾಯಾಧೀಶರು, ಶಿಕ್ಷೆಯ ನಂತರದ ಮೇಲ್ವಿಚಾರಣಾ ಬಿಡುಗಡೆಯಯಾವುದೇ ಷರತ್ತನ್ನು ವಿಧಿಸಲಿಲ್ಲ.

ಶಿಕ್ಷೆ ಪ್ರಕಟಿಸುವ ವಿಚಾರಣೆಯಲ್ಲಿ ಭಾಗವಹಿಸಲು, ಪನ್ನುನ್‌ ಅವರ ಬೆಂಬಲಿಗರ ದೊಡ್ಡ ಗುಂಪು ಮ್ಯಾನ್‌ಹ್ಯಾಟನ್‌ನ ಡೌನ್‌ಟೌನ್‌ನಲ್ಲಿರುವ ನ್ಯೂಯಾರ್ಕ್‌ ಫೆಡರಲ್‌ ನ್ಯಾಯಾಲಯದ ಹೊರಗೆ ಜಮಾಯಿಸಿತ್ತು.ಜೈಲಿನ ಸಮವಸ್ತ್ರ ಧರಿಸಿದ್ದ ಗುಪ್ತಾ ಅವರನ್ನು ಮಾರ್ಷಲ್‌ಗಳು ನ್ಯಾಯಾಲಯದ ಕೊಠಡಿಗೆ ಕರೆತಂದರು. ಒಳಗೆ ಪ್ರವೇಶಿಸುವಾಗ ಅವರು ಸುತ್ತಲೂ ಗಮನಿಸಿ, ನಂತರ ತಮ್ಮ ವಕೀಲರ ನಡುವೆ ಕುಳಿತುಕೊಂಡರು.

ಸ್ಥಳೀಯ ಕಾಲಮಾನ ಬೆಳಿಗ್ಗೆ 10:10 ರ ಸುಮಾರಿಗೆ ನ್ಯಾಯಾಲಯದ ಕಲಾಪಗಳು ಪ್ರಾರಂಭವಾದವು. ಈ ವೇಳೆ ಅಭಿಯೋಜಕರು (ಸರ್ಕಾರಿ ಪರ ವಕೀಲರು) ಮತ್ತು ರಕ್ಷಣಾ ವಕೀಲರು ತಮ್ಮ ವಾದಗಳನ್ನು ಮಂಡಿಸಿದರು.ತಾನು ತಪ್ಪೊಪ್ಪಿಕೊಂಡಿದ್ದ ಹೇಳಿಕೆಯನ್ನು ಹಿಂಪಡೆಯಲು ಬಯಸುತ್ತೀರಾ ಎಂದು ನ್ಯಾಯಾಧೀಶರು ಕೇಳಿದಾಗ, ಗುಪ್ತಾ ಎದ್ದು ನಿಂತು, ಇಲ್ಲ, ನಾನು ನನ್ನ ತಪ್ಪೊಪ್ಪಿಗೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಮತ್ತು ಜೋರಾಗಿ ಹೇಳಿದರು.

ತನ್ನ ಕೃತ್ಯಗಳಿಗೆ ಮದ್ಯಪಾನದ ದುಶ್ಚಟವೇ ಕಾರಣ ಎಂದು ಗುಪ್ತಾ ನೀಡಿದ ಸಮರ್ಥನೆಯನ್ನು ಅಭಿಯೋಜಕರು ತಳ್ಳಿಹಾಕಿದರು. ಗುಪ್ತಾ ಈ ಸಂಚಿನಲ್ಲಿ ಅತ್ಯುತ್ಸಾಹದಿಂದ ಭಾಗಿಯಾಗಿದ್ದರು ಎಂದು ಅವರು ವಾದಿಸಿದರು.ಈ ಸಂಚಿನಲ್ಲಿ ಗುಪ್ತಾ ಅವರ ಪಾತ್ರ ಮತ್ತು ಭಾಗವಹಿಸುವಿಕೆಯನ್ನು ತೋರಿಸುವ ಆಡಿಯೋ ರೆಕಾರ್ಡಿಂಗ್‌ಗಳನ್ನು ನ್ಯಾಯಾಲಯದಲ್ಲಿ ಪ್ಲೇ ಮಾಡಲು ಅಭಿಯೋಜಕರು ಬಯಸಿದ್ದರು. ಆದರೆ, ತಪ್ಪೊಪ್ಪಿಕೊಂಡ ನಂತರ ಇನ್ನು ಯಾವುದೇ ಪ್ರಶ್ನೆಗಳು ಬಾಕಿ ಉಳಿದಿಲ್ಲ ಮತ್ತು ನ್ಯಾಯಾಲಯದಲ್ಲಿ ಆಡಿಯೋ ರೆಕಾರ್ಡಿಂಗ್‌ಗಳನ್ನು ಪ್ಲೇ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಾ ನ್ಯಾಯಾಧೀಶರು ಆ ಮನವಿಯನ್ನು ತಿರಸ್ಕರಿಸಿದರು.

ಶಿಕ್ಷೆ ಪ್ರಕಟಿಸುವ ವಿಚಾರಣೆಯ ಸಂದರ್ಭದಲ್ಲಿ ಯಾವುದೇ ಆಡಿಯೋ ರೆಕಾರ್ಡಿಂಗ್‌ಗಳನ್ನು ಪ್ಲೇ ಮಾಡುವುದನ್ನು ರಕ್ಷಣಾ ವಕೀಲರೂ ವಿರೋಧಿಸಿದ್ದರು. ಪನ್ನುನ್‌ ಅವರನ್ನು ಕೊಲ್ಲುವ ಸಂಚು ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ಭಾರತದಲ್ಲಿ ಗುಪ್ತಾ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ (ಕ್ರಿಮಿನಲ್‌ ರೆಕಾರ್ಡ್‌) ಇರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ರಕ್ಷಣಾ ಪರ ವಕೀಲರು ತಿಳಿಸಿದರು.

RELATED ARTICLES

Latest News