ಬೆಂಗಳೂರು, ನ.21- ಸಚಿವ ಸಂಪುಟದಲ್ಲಿ 2 ಸ್ಥಾನಗಳು ಬಾಕಿ ಉಳಿದಿರುವ ನಡುವೆಯೇ ನಿಗಮ ಮಂಡಲಿಗಳಿಗೆ ಹಿರಿಯ ನಾಯಕರನ್ನು ನೇಮಿಸಿ ಅಸಮಾಧಾನವನ್ನು ತಣಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ನೇಮಕಾತಿ ಪ್ರಕ್ರಿಯೆಗಳೇ ಗೊಂದಲ ಉಂಟು ಮಾಡುತ್ತಿವೆ.
ಕಾಂಗ್ರೆಸ್ ಪಕ್ಷದಲ್ಲಿ ಸಚಿವಸ್ಥಾನ ವಂಚಿತರ ಪಟ್ಟಿ ದೊಡ್ಡದಿದೆ. ಸಂಪುಟದಲ್ಲಿ ಕೆಲವರು ಅರ್ಹತೆ ಮೀರಿ ಅವಕಾಶಗಿಟ್ಟಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹಿರಿಯರನ್ನು ಕಡೆಗಣಿಸಿ ಸಂಪುಟದಲ್ಲಿ ಕುಟುಂಬದ ಪಾರುಪತ್ಯಕ್ಕೆ ಮಣೆ ಹಾಕಲಾಗಿದೆ. ಐದಾರು ಬಾರಿ ಗೆದ್ದವರನ್ನು ಕಡೆಗಣಿಸಿ ಮೊದಲ ಬಾರಿ ಆಯ್ಕೆಯಾದವತಿಗೆ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ ಮಣೆ ಹಾಕಲಾಗಿದೆ ಎಂಬ ಆರೋಪಗಳಿವೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ, ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ನಿಗಮ ಮಂಡಲಿಗಳಿಗೆ ನೇಮಕಾತಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಶಾಸಕರಿಗೆ ಅಧಿಕಾರ ನೀಡಲು ಹೈಕಮಾಂಡ್ ಅನುಮತಿಸಿದೆ. ಸುಮಾರು 50ಕ್ಕೂ ಹೆಚ್ಚು ಶಾಸಕರಿಗೆ ನಿಗಮ ಮಂಡಲಿಯಲ್ಲಿ ಅವಕಾಶ ಕಲ್ಪಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಅದರಲ್ಲಿ ಯಾರನ್ನು ಯಾವ ಸ್ಥಾನಕ್ಕೆ ಆಯ್ಕೆ ಮಾಡಬೇಕು? ಪ್ರಸ್ತಾವಿತ ಶಾಸಕರು ಎಷ್ಟು ಬಾರಿ ಆಯ್ಕೆಯಾಗಿದ್ದಾರೆೆ? ಪಕ್ಷದಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ? ಎಂಬೆಲ್ಲಾ ಅಂಶಗಳನ್ನು ಡಿ.ಕೆ.ಶಿವಕುಮಾರ್ ತಮ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ. ಬಹುತೇಕ ಸಚಿವ ಸಂಪುಟದಲ್ಲಿ ಸ್ಥಾನಗಿಟ್ಟಿಸಲು ಆಕಾಂಕ್ಷಿಗಳಾಗಿದ್ದ ಪ್ರಮುಖ ಶಾಸಕರನ್ನು ನಿಗಮ ಮಂಡಲಿಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಕೆಲವು ತಪ್ಪು ನಿರ್ಧಾರಗಳನ್ನು ಕಾಂಗ್ರೆಸ್ ಕೈಗೊಳ್ಳುತ್ತಿದೆ ಎಂಬ ಆಕ್ಷೇಪಗಳಿವೆ.
ಐದಾರು ಬಾರಿ ಗೆಲುವು ಕಂಡಿರುವ ಹಿರಿಯ ಶಾಸಕರನ್ನು ನಿಗಮ ಮಂಡಲಿಗಳಿಗೆ ನೇಮಿಸುವ ಮೂಲಕ ಕಡೆಗಣಿಸಲಾಗುತ್ತಿದೆ. ಮಾಜಿ ಸಚಿವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಕೆಲವರು ಈ ಹುದ್ದೆಗಳನ್ನು ಒಪ್ಪಿಕೊಳ್ಳಲು ಹಿಂದು-ಮುಂದು ನೋಡುತ್ತಿದ್ದಾರೆ. ಆದರೆ ವಿಧಾನಸಭೆಯ ಅವಧಿ ಒಂದೂವರೆ ವರ್ಷ ಇರುವುದರಿಂದ ಸಿಕ್ಕಿದ್ದೇ ಸೀರುಂಡೆ ಎಂಬಂತೆ ಕೆಲವರು ನಿಗಮ ಮಂಡಲಿಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಮಗೆ ಯಾವ ಸ್ಥಾನವೂ ಬೇಡ, ಕಾರ್ಯಕರ್ತರಾಗಿಯೇ ಇರುತ್ತೇವೆ ಎಂದು ಹೇಳುತ್ತಿರುವುದು ಕಂಡುಬಂದಿದೆ.
ಹಿರಿಯ ಶಾಸಕ ಹಂಪನಗೌಡ ಬಾದರ್ಲಿ ತಾವು 5 ಬಾರಿ ಶಾಸಕರಾಗಿದ್ದು, ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದನ್ನು ವಹಿಸಿಕೊಳ್ಳುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡುತ್ತೇನೆ. ತಮ ಕ್ಷೇತ್ರದ ನಾಯಕರ ಜೊತೆ ಕೂಡ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಕೆಲವು ಶಾಸಕರಿಗೆ ತಮಗೆ ನೀಡಲಾಗಿರುವ ಅಧ್ಯಕ್ಷ ಸ್ಥಾನದ ಬಗ್ಗೆ ಸಂತೃಪ್ತಿ ಇದೆ. ಆದರೆ ಕೆ. ಷಡಕ್ಷರಿ, ಪಿ.ಎಂ.ಅಶೋಕ್, ಡಿ.ಜಿ. ಶಾಂತನಗೌಡ, ಎಸ್.ಎನ್.ಸುಬ್ಬಾರೆಡ್ಡಿ, ಮಾಜಿ ಸಚಿವ ತನ್ವೀರ್ ಸೇಠ್ ಅವರಂತಹ ಹಿರಿಯರು ನಿಗಮ ಮಂಡಲಿಗಳ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಮೀನಾಮೇಷ ಎಣಿಸುತ್ತಿದ್ದಾರೆ.
ನಿಗಮ ಮಂಡಲಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅಸಮಾಧಾನ ತಣಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದ ಕಾಂಗ್ರೆಸ್ ನಾಯಕರಿಗೆ, ಶಾಸಕರ ಅಸಮಾಧಾನಗಳು ಬಿಸಿ ತುಪ್ಪವಾಗಿದೆ.
ಕೆಲ ತಿಂಗಳ ಹಿಂದೆ ಈ ಬಗ್ಗೆ ಶಾಸಕರ ಜೊತೆ ಚರ್ಚೆ ಮಾಡಲಾಗಿತ್ತು. ಪ್ರಸ್ತಾವನೆ ಎರಡೂವರೆ ತಿಂಗಳ ಹಿಂದೆ ಹೈಕಮಾಂಡ್ಗೆ ಸಲ್ಲಿಕೆಯಾಗಿತ್ತು. ಅಂಗೀಕಾರ ತಡವಾಗಿದ್ದರಿಂದ ಕೆಲವು ಶಾಸಕರು ಅಧಿಕಾರದ ಆಸೆಯನ್ನೇ ಬಿಟ್ಟಿದ್ದಾರೆ. ಈ ಹಂತದಲ್ಲಿ ಹೈಕಮಾಂಡ್ ಅನುಮತಿಸಿರುವ ಪಟ್ಟಿಯನ್ನು ರವಾನೆ ಮಾಡಿದೆ. ಇತ್ತೀಚೆಗೆ ತಮೊಂದಿಗೆ ಯಾವುದೇ ಚರ್ಚೆ ಮಾಡದೇ ಏಕಾಏಕಿ ನೇಮಿಸಲಾಗಿದೆ ಎಂದು ಕೆಲವು ಹಿರಿಯ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.
ಮುಖ್ಯಮಂತ್ರಿಯವರು ತಾವು ಬಹಳ ಹಿಂದೆಯೇ ಪಟ್ಟಿ ಕಳುಹಿಸಿದ್ದೆ. ಅಂಗೀಕಾರಕ್ಕೆ ತಡವಾಗಿದೆ ಎಂದು ಸಮಾಧಾನ ಪಡಿಸುತ್ತಿದ್ದಾರೆ.ಕೆಲವು ಶಾಸಕರು ಹೈಕಮಾಂಡ್ ವಿರುದ್ಧ ಮಾತನಾಡಲೂ ಆಗದೆ ಇತ್ತ ತಮಗಾಗುತ್ತಿರುವ ಅಪಮಾನವನ್ನು ಸಹಿಸಲು ಆಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ.
