ಬೆಂಗಳೂರು,ನ.21- ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಸಂಪೂರ್ಣವಾಗಿ ಪರಿಹಾರಧನ ನೀಡದೇ ಇದ್ದರೆ ಯಾವ ರೀತಿ ಅಧಿವೇಶನ ನಡೆಯುತ್ತದೆ ಎಂದು ವಿಪಕ್ಷವಾಗಿ ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರೈತರು ಹತಾಶರಾಗಿ ಆತಹತ್ಯೆಗೆ ಮುಂದಾಗುತ್ತಿದ್ದಾರೆ. ಮಾನಸಿಕ ಸ್ಥೈರ್ಯ ಕಳಕೊಳ್ಳುತ್ತಿರುವ ರೈತರಿಗೆ ರಾಜ್ಯ ಸರಕಾರ ತಡ ಮಾಡದೇ ಪರಿಹಾರಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ರೈತರಿಗೆ ಪರಿಹಾರಧನ ನೀಡಲು ಷರತ್ತು ಹಾಕಿ ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 50 ಲಕ್ಷ ರೈತರಿಗೆ ಬೆಳಗಾವಿ ಅಧಿವೇಶನ ಪ್ರಾರಂಭಕ್ಕೂ ಮೊದಲೇ ಪರಿಹಾರ ಮೊತ್ತವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. 2500 ರೂ. ಎಂದು ಅವರೇ ಘೋಷಿಸಿದ್ದಾರೆ. 2500 ಎಂದಿದ್ದುದು 5 ಸಾವಿರ ಎನ್ನುತ್ತಾರೆ. ಒಂದು ಕಡೆ ಮುಖ್ಯಮಂತ್ರಿಗಳು ಪ್ರತಿ ಎಕರೆಗೆ ಎನ್ನುತ್ತಾರೆ.
ಒಂದು ಹೆಕ್ಟೇರ್ಗೆ ಪರಿಹಾರ ಎಂದು ಕಂದಾಯ ಸಚಿವರು ಹೇಳುತ್ತಾರೆ ಎಂದು ಗಮನಕ್ಕೆ ತಂದರು. ಆ ಗೊಂದಲವನ್ನೂ ಸರಿಪಡಿಸಿ 5 ಸಾವಿರ ಬಿಡುಗಡೆ ಮಾಡಿ ಎಂದು ಅವರು ಒತ್ತಾಯಿಸಿದರು. ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಮಾಜಿ ಸಚಿವ ಮತ್ತು ಶಾಸಕ ಕೆ. ಗೋಪಾಲಯ್ಯ, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಉಪಸ್ಥಿತರಿದ್ದರು.
